ತೆಲುಗು ರಾಜ್ಯಗಳಲ್ಲಿ ರಾಕಿಂಗ್ ಸ್ಟಾರ್ ಹವಾ

ಅವರ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆ ದಾಖಲೆಯ ಮೊತ್ತಕ್ಕೆ ಖರೀದಿಸಿದೆ.

ತೆಲುಗು ರಾಜ್ಯಗಳ ವಿತರಣಾ ಹಕ್ಕುಗಳನ್ನು ಬರೋಬ್ಬರಿ 120 ಕೋಟಿ ರೂ.ಗಳಿಗೆ ಪಡೆದುಕೊಳ್ಳಲಾಗಿದೆ. ಇದು ತೆಲುಗು ಮೂಲವಲ್ಲದ ಸಿನಿಮಾವೊಂದಕ್ಕೆ ದೊರೆತ ಅತಿ ದೊಡ್ಡ ವಿತರಣಾ ಡೀಲ್ ಎಂದು ಹೇಳಲಾಗುತ್ತಿದೆ. ಈ ಹಕ್ಕುಗಳಿಗಾಗಿ ಮೂರು ಪ್ರಮುಖ ವಿತರಣಾ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ದಿಲ್ ರಾಜು ಅವರ ಸಂಸ್ಥೆ ಗೆಲುವು ಸಾಧಿಸಿದೆ.

ತೆಲುಗು ರಾಜ್ಯಗಳಲ್ಲಿ ಯಶ್ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದು, ‘ಕೆಜಿಎಫ್ 2’ ಸಿನಿಮಾ ಅಲ್ಲಿ ದಾಖಲೆ ಮಟ್ಟದ ಗಳಿಕೆ ಕಂಡಿತ್ತು. ಅದಾದ ಬಳಿಕ ಯಶ್ ಅಭಿನಯದ ಮುಂದಿನ ಚಿತ್ರಕ್ಕಾಗಿ ತೆಲುಗು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದು, ‘ಟಾಕ್ಸಿಕ್’ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿರುವ ಈ ಸಿನಿಮಾ ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಈ ಕುರಿತು ಮಾತನಾಡಿದ ದಿಲ್ ರಾಜು,
“ಯಶ್ ಇಂದು ಭಾರತೀಯ ಚಿತ್ರರಂಗದ ಅಪ್ರತಿಮ ಶಕ್ತಿಯಾಗಿ ನಿಂತಿದ್ದಾರೆ. ‘ಕೆಜಿಎಫ್-2’ ನಂತರ ಅವರ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬಲಿಷ್ಠವಾಗಿದೆ. ನಾಲ್ಕು ವರ್ಷಗಳ ಕಾಯುವಿಕೆಯ ನಂತರ ಬರುತ್ತಿರುವ ಈ ಚಿತ್ರದಿಂದ ಭಾರೀ ನಿರೀಕ್ಷೆಗಳಿವೆ. ಇಂತಹ ಪ್ರತಿಷ್ಠಿತ ಚಿತ್ರವನ್ನು ವಿತರಣೆ ಮಾಡುವ ಅವಕಾಶ ನಮಗೆ ದೊರೆತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದ್ದಾರೆ.

ಯಶ್ ಮತ್ತು ಗೀತು ಮೋಹನ್ ದಾಸ್ ಜಂಟಿಯಾಗಿ ಕಥೆ-ಸ್ಕ್ರಿಪ್ಟ್ ರಚಿಸಿದ್ದು, ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ. ‘ಟಾಕ್ಸಿಕ್’ ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಸೇರಿದಂತೆ ಅನೇಕ ತಾರಾಗಣ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ರಾಜೀವ್ ರವಿ ಅವರ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಉಜ್ವಲ್ ಕುಲಕರ್ಣಿ ಸಂಕಲನ ಮತ್ತು ಟಿ.ಪಿ. ಆಬಿದ್ ಅವರ ಪ್ರೊಡಕ್ಷನ್ ಡಿಸೈನ್ ಇದೆ. ಸಾಹಸ ದೃಶ್ಯಗಳನ್ನು ಹಾಲಿವುಡ್ ಖ್ಯಾತಿಯ ಜೆ.ಜೆ. ಪೆರ್ರಿ (ಜಾನ್ ವಿಕ್), ರಾಷ್ಟ್ರ ಪ್ರಶಸ್ತಿ ವಿಜೇತ ಅನ್ಬರಿವ್ ಹಾಗೂ ಕೆಚಾ ಕಂಫಕ್ಡಿ ಅದ್ದೂರಿಯಾಗಿ ಸಂಯೋಜಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-06 18:12:50
No Reviews