ವಿಜಯ್ ಬೆಂಬಲಕ್ಕೆ ನಿಂತ ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್

ತಮಿಳುನಾಡು ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಬೆಳವಣಿಗೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಭರ್ಜರಿ ಪ್ರದರ್ಶನ ನೀಡಿದೆ. ಆದರೆ ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆ ಎದುರಾಗಿದ್ದು, ರಾಜ್ಯದ ರಾಜಕೀಯ ಚಿತ್ರಣ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ನಡುವೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸರ್ಕಾರ ರಚನೆಗೂ ಮುನ್ನವೇ ವಿಜಯ್ ಬಹುಮತ ಸಾಬೀತುಪಡಿಸಬೇಕೆಂದು ಸೂಚಿಸಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ರಾಜ್ಯಪಾಲರ ಈ ನಡೆಗೆ ಇದೀಗ ನಟರು ಹಾಗೂ ರಾಜಕೀಯ ವಲಯದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವಿಶೇಷವೆಂದರೆ, ಚುನಾವಣಾ ಸಮಯದಲ್ಲಿ ವಿಜಯ್ ವಿರುದ್ಧವೇ ನಿಂತಿದ್ದ ನಟ ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್ ಈಗ ಅವರ ಪರವಾಗಿ ಧ್ವನಿ ಎತ್ತಿದ್ದಾರೆ. ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕಮಲ್ ಹಾಸನ್, “ಜನರು ಸ್ಪಷ್ಟ ತೀರ್ಪು ನೀಡಿದ್ದಾರೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ TVKಗೆ ಸರ್ಕಾರ ರಚಿಸಲು ಅವಕಾಶ ನೀಡದೇ ಇರುವುದು ಜನಾದೇಶಕ್ಕೆ ಅವಮಾನ” ಎಂದು ಕಿಡಿಕಾರಿದ್ದಾರೆ.

ಇದರ ಜೊತೆಗೆ ಅವರು ಸುಪ್ರೀಂ ಕೋರ್ಟ್‌ನ ಐತಿಹಾಸಿಕ ಎಸ್.ಆರ್. ಬೊಮ್ಮಾಯಿ ಪ್ರಕರಣ ಉಲ್ಲೇಖಿಸಿ, “ಬಹುಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸಬೇಕು, ರಾಜಭವನದಲ್ಲಿ ಅಲ್ಲ” ಎಂದು ನೆನಪಿಸಿದ್ದಾರೆ. “ಇದು ಪಕ್ಷ ರಾಜಕೀಯದ ಪ್ರಶ್ನೆಯಲ್ಲ, ಪ್ರಜಾಪ್ರಭುತ್ವದ ಗೌರವದ ಪ್ರಶ್ನೆ” ಎಂದೂ ಹೇಳಿದ್ದಾರೆ.

ಇನ್ನೊಂದೆಡೆ ನಟ ಪ್ರಕಾಶ್ ರಾಜ್ ಕೂಡ ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಜನರು ವಿಜಯ್ ಅವರಿಗೆ ಮ್ಯಾಂಡೇಟ್ ನೀಡಿದ್ದಾರೆ. ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಲೇಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ರಾಜಕೀಯವಾಗಿ ಎದುರಾಳಿಗಳಾಗಿದ್ದ ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್ ಇದೀಗ ವಿಜಯ್ ಪರ ನಿಂತಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲರ ನಡೆ, ಜನಾದೇಶ ಮತ್ತು ಸಂವಿಧಾನದ ವ್ಯಾಖ್ಯಾನ ಇದೀಗ ತಮಿಳುನಾಡಿನ ಪ್ರಮುಖ ರಾಜಕೀಯ ವಿಚಾರವಾಗಿ ಪರಿಣಮಿಸಿದೆ.

 

 

 

 

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-07 15:12:07
No Reviews