ಟಾಕ್ಸಿಕ್ ಟೀಸರ್: ಯಶ್ ಕ್ಲೀನ್ ಶೇವ್ ಲುಕ್‌ಗೆ ಫ್ಯಾನ್ಸ್ ಫಿದಾ

‘ಹಠ ಬಿಡೋ ಮಾತೇ ಇಲ್ಲ’ — ಈ ಒಂದೇ ಡೈಲಾಗ್‌ನಿಂದಲೇ ‘ಟಾಕ್ಸಿಕ್’ ಟೀಸರ್ ಭರ್ಜರಿ ಸದ್ದು ಮಾಡುತ್ತಿದೆ. ‘ರಾಕಿಂಗ್ ಸ್ಟಾರ್’ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸುಳಿವು ಸಿಕ್ಕಿದ್ದು, ರಾಯನ ಮಗನಾ? ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ. 1 ನಿಮಿಷ 55 ಸೆಕೆಂಡ್ ಟೀಸರ್‌ನಲ್ಲಿ ಹೈ-ಆಕ್ಟೇನ್ ಆಕ್ಷನ್, ರಕ್ತಸಿಕ್ತ ದೃಶ್ಯಗಳು ಹಾಗೂ “ಈ ಸಲ ಯುದ್ಧನೇ ಬೇರೆ” ಎನ್ನುವ ಸಂಭಾಷಣೆ ಫ್ಯಾನ್ಸ್‌ರನ್ನು ಥ್ರಿಲ್ ಮಾಡಿವೆ. “It’s gonna get crazy!!!” ಎಂಬ ಕ್ಯಾಪ್ಷನ್ ಜೊತೆಗೆ ಬಿಡುಗಡೆಯಾದ ಟೀಸರ್‌ಗೆ ಹಾಲಿವುಡ್ ವೈಬ್ ಇದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್-ಥ್ರಿಲ್ಲರ್‌ಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಯಶ್ ಕೂಡ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಯಶ್ ‘ರಾಯ’ ಪಾತ್ರದಲ್ಲಿ ಮಿಂಚಿದರೆ, ಕಿಯಾರಾ ಅಡ್ವಾಣಿ ‘ನಾಡಿಯಾ’, ಹುಮಾ ಖುರೇಷಿ ‘ಎಲಿಜಬೆತ್’, ನಯನತಾರಾ ‘ಗಂಗಾ’ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಕೂಡ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಹಾಲಿವುಡ್ ಖ್ಯಾತ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಆಕ್ಷನ್ ಸಂಯೋಜನೆ ಮಾಡಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಉಜ್ವಲ್ ಕುಲಕರ್ಣಿ ಸಂಕಲನ ಚಿತ್ರಕ್ಕೆ ಹೆಚ್ಚುವರಿ ಮೆರುಗು ನೀಡಿವೆ. ಮಾರ್ಚ್ 19ರಂದು ವಿಶ್ವಾದ್ಯಂತ ‘ಟಾಕ್ಸಿಕ್’ ತೆರೆಕಾಣಲು ಸಜ್ಜಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-20 11:06:11
No Reviews