ನಾಸಿಕ್ TCS, ಹುಬ್ಬಳ್ಳಿ ಜಿಮ್ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯ

ಬೆಂಗಳೂರು, ಏ.21: ಮಹಾರಾಷ್ಟ್ರದ ನಾಸಿಕ್‌ನ ಐಟಿ ಕಂಪನಿಯಲ್ಲಿ ಬೆಳಕಿಗೆ ಬಂದಿರುವ ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ, ರಾಜ್ಯದ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಜಿಮ್‌ಗಳಲ್ಲಿ ಮಹಿಳಾ ಸುರಕ್ಷತೆ, ಧಾರ್ಮಿಕ ಒತ್ತಡ ಮತ್ತು ಕಾರ್ಯಸ್ಥಳದ ದುರ್ಬಳಕೆ ಆರೋಪಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ.

ಮಹಿಳಾ ನೌಕರರಿಂದ ಬಂದಿರುವ ದೂರಿನ ಪ್ರಕಾರ, ಕೆಲ ಕಂಪನಿಗಳಲ್ಲಿ ಲೈಂಗಿಕ ಕಿರುಕುಳ, ಬೆದರಿಕೆ ಹಾಗೂ ಧಾರ್ಮಿಕ ಒತ್ತಡದಂತಹ ಗಂಭೀರ ಆರೋಪಗಳು ಕೇಳಿಬಂದಿದ್ದು, ಇಂತಹ ಘಟನೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.

ಮಹಿಳಾ ಗೌರವ ಮತ್ತು ಸುರಕ್ಷತೆ ಯಾವುದೇ ಸಮಾಜದ ಮೂಲಾಧಾರವಾಗಿದ್ದು, ಇಂತಹ ಪ್ರಕರಣಗಳಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಸಮಿತಿ ತಿಳಿಸಿದೆ. ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಮನ್ವಯಕ ಶರತ್ ಕುಮಾರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸುಂದರೇಶ್ ನರ್ಗಲ್, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶರತ್ ಕುಮಾರ್, ವಕೀಲ ರವಿ ಶಂಕರ್, ಹಿಂದೂ ಮುಖಂಡರಾದ ಜ್ಯೋತಿ ಗೌಡ, ಮಂಜುನಾಥ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-21 18:37:48
No Reviews