ಆಗಸ್ಟ್ 12ರ ಸೂರ್ಯಗ್ರಹಣ: ಭಾರತದಲ್ಲಿ ಕಾಣಿಸಬಹುದಾ? ಚರ್ಚೆ ಜೋರಾಗಿದೆ

2026ರ ಆಗಸ್ಟ್ 12ರಂದು ನಡೆಯಲಿರುವ ಸಂಪೂರ್ಣ ಸೂರ್ಯಗ್ರಹಣ ಈಗಲೇ ಜಗತ್ತಿನ ಖಗೋಳ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸುಮಾರು 1 ನಿಮಿಷ 53 ಸೆಕೆಂಡುಗಳ ಕಾಲ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚಲಿದ್ದು, ಹಗಲಿನಲ್ಲೇ ಕತ್ತಲೆ ಆವರಿಸುವ ಅಪರೂಪದ ದೃಶ್ಯಕ್ಕೆ ಆರ್ಕ್ಟಿಕ್, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಮತ್ತು ಸ್ಪೇನ್ ಸಾಕ್ಷಿಯಾಗಲಿವೆ. ಇದೇ ವೇಳೆ ಸೂರ್ಯನ ಹೊರಪದರವಾದ ‘ಕರೋನಾ’ ಸ್ಪಷ್ಟವಾಗಿ ಗೋಚರಿಸುವುದರಿಂದ ವಿಜ್ಞಾನಿಗಳಿಗೆ ಇದು ಅತ್ಯಂತ ಮಹತ್ವದ ಅಧ್ಯಯನ ಕ್ಷಣವಾಗಿ ಪರಿಣಮಿಸಿದೆ.

ಈ ಗ್ರಹಣವನ್ನು ಯುರೋಪ್ ವಿಶೇಷ ಉತ್ಸಾಹದಿಂದ ಎದುರು ನೋಡುತ್ತಿದೆ. 1999ರ ಬಳಿಕ ಯುರೋಪಿನ ದೊಡ್ಡ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಸಂಪೂರ್ಣ ಸೂರ್ಯಗ್ರಹಣ ಇದಾಗಿದ್ದು, ಐಸ್‌ಲ್ಯಾಂಡ್‌ಗೆ ಸುಮಾರು 72 ವರ್ಷಗಳ ಬಳಿಕ ಸಿಗುತ್ತಿರುವ ಅಪರೂಪದ ಅನುಭವವೂ ಹೌದು. ಹೀಗಾಗಿ ವಿಶ್ವದ ಮೂಲೆಮೂಲೆಗಳಿಂದ ಖಗೋಳಶಾಸ್ತ್ರಜ್ಞರು ಮತ್ತು ಪ್ರವಾಸಿಗರು ಈ ದೃಶ್ಯ ವೀಕ್ಷಣೆಗೆ ಸಜ್ಜಾಗಿದ್ದಾರೆ.

ಭಾರತೀಯರ ಪಾಲಿಗೆ ಒಂದು ನಿರಾಶೆಯ ಸಂಗತಿ ಎಂದರೆ, ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣ ಸಂಭವಿಸುವ ವೇಳೆಗೆ ಭಾರತದಲ್ಲಿ ರಾತ್ರಿ ಇರುವುದರಿಂದ ಈ ಅದ್ಭುತ ಆಕಾಶ ವಿಸ್ಮಯವನ್ನು ನೇರವಾಗಿ ಕಾಣಲು ಸಾಧ್ಯವಾಗುವುದಿಲ್ಲ. ಅದೇ ಕಾರಣದಿಂದ ಭಾರತದಲ್ಲಿ ಯಾವುದೇ ಸೂತಕ ಅವಧಿ ಅಥವಾ ಧಾರ್ಮಿಕ ನಿರ್ಬಂಧಗಳೂ ಅನ್ವಯವಾಗುವುದಿಲ್ಲ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-20 15:13:14
No Reviews