ಎರಡನೇ ತವರು ರಾಯ್ಪುರ ಆರ್‌ಸಿಬಿ ಪ್ಲ್ಯಾನ್ ಏನು?

ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಅದ್ಭುತ ಫಾರ್ಮ್‌ನಲ್ಲಿ ಇರುವ ಹಾಲಿ ಚಾಂಪಿಯನ್ ಆರ್‌ಸಿಬಿ, 7 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಭದ್ರಪಡಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ತವರು ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡ, ಉಳಿದ 2 ಪಂದ್ಯಗಳನ್ನು ರಾಯ್ಪುರದಲ್ಲಿ ಆಡಲು ಸಜ್ಜಾಗಿದೆ.

ಕಳೆದ ವರ್ಷದ ವಿಜಯೋತ್ಸವದ ವೇಳೆ ನಡೆದ ದುರಂತ ಕಾಲ್ತುಳಿತದ ನಂತರ ಮೈದಾನದ ಲಭ್ಯತೆ ಕುರಿತು ಉಂಟಾದ ಅನಿಶ್ಚಿತತೆ ಹಿನ್ನೆಲೆ, ಫ್ರಾಂಚೈಸಿ ರಾಯ್ಪುರವನ್ನು ಎರಡನೇ ತವರಾಗಿ ಆಯ್ಕೆ ಮಾಡಿಕೊಂಡಿತ್ತು. ನಂತರ ರಾಜ್ಯ ಸರ್ಕಾರದಿಂದ ಅನುಮತಿ ದೊರೆತರೂ, ಛತ್ತೀಸ್‌ಗಢ ಕ್ರಿಕೆಟ್ ಸಂಘದೊಂದಿಗೆ ಮಾಡಿದ ಒಪ್ಪಂದವನ್ನು ಗೌರವಿಸಿ ರಾಯ್ಪುರದಲ್ಲೇ 2 ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿದೆ.

ಮೇ 10ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯ ಹಾಗೂ ಮೇ 13ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅಂತಿಮ ಪಂದ್ಯ ರಾಯ್ಪುರದಲ್ಲಿ ನಡೆಯಲಿದೆ. ಫೈನಲ್ ತಲುಪಿದರೆ ಮತ್ತೆ ಚಿನ್ನಸ್ವಾಮಿ ಮೈದಾನದಲ್ಲಿ ಆಡಲು ಅವಕಾಶ ಸಿಗಲಿದೆ. ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ 4 ಗೆಲುವು ಸಾಧಿಸಿದರೆ ಆರ್‌ಸಿಬಿ ಪ್ಲೇಆಫ್‌ಗೆ ಸುಲಭವಾಗಿ ಪ್ರವೇಶ ಪಡೆಯಲಿದೆ.

ಇದಕ್ಕೆ ಮುನ್ನ ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿತು. 205 ರನ್‌ಗಳ ದೊಡ್ಡ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ, ವಿರಾಟ್ ಕೊಹ್ಲಿ (81) ಮತ್ತು ದೇವದತ್ ಪಡಿಕ್ಕಲ್ (55) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 18.5 ಓವರ್‌ಗಳಲ್ಲಿ 206/5 ರನ್‌ ಗಳಿಸಿ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್‌:
ಗುಜರಾತ್ – 205/3 (ಸಾಯಿ ಸುದರ್ಶನ್ 100)
ಆರ್‌ಸಿಬಿ – 206/5 (ವಿರಾಟ್ ಕೊಹ್ಲಿ 81, ಪಡಿಕ್ಕಲ್ 55)

ಚಿನ್ನಸ್ವಾಮಿ ಮೈದಾನದ ಬಗ್ಗೆ ಮಾತನಾಡಿದ ಕೊಹ್ಲಿ, “ಇಲ್ಲಿ ಆಡುವುದೇ ಒಂದು ವಿಶೇಷ ಅನುಭವ” ಎಂದು ಮನದಾಳದ ಮಾತು ಹಂಚಿಕೊಂಡರು


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-25 11:44:38
No Reviews