ಪಡಿತರದಾರರಿಗೆ ಗುಡ್‌ನ್ಯೂಸ್‌! ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಬಂತು ಹೊಸ ‘ಅನ್ನಸೇವೆ’ ಆ್ಯಪ್

ಪಡಿತರದಾರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಇನ್ನು ಮುಂದೆ ಮನೆಯಲ್ಲೇ ಕುಳಿತು ರೇಷನ್ ಕಾರ್ಡ್‌ನ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳ ಬಳಿ ಫಲಾನುಭವಿಗಳು ಎದುರಿಸುತ್ತಿದ್ದ ತೊಂದರೆ ನಿವಾರಿಸುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನಸೇವೆ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.

‘ಅನ್ನಸೇವೆ’ ಆ್ಯಪ್ ಅನ್ನು ಮೊದಲ ಹಂತದಲ್ಲಿ ಪೈಲೆಟ್ ಯೋಜನೆಯಡಿ ರಾಜ್ಯದ 8 ಜಿಲ್ಲೆಗಳಲ್ಲಿ ಪರಿಚಯಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಯ ಪಡಿತರದಾರರು ಸದ್ಯ ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. 20 ದಿನಗಳ ಬಳಿಕ ರಾಜ್ಯದ ಉಳಿದ ಜಿಲ್ಲೆಗಳಿಗೂ ಆ್ಯಪ್ ಸೇವೆ ವಿಸ್ತರಿಸುವುದಾಗಿ ಸರ್ಕಾರ ತಿಳಿಸಿದೆ.

ಬೆಂಗಳೂರಿನ ಶಿವಾಜಿನಗರದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ‘ಅನ್ನಸೇವೆ’ ಇ-ಕೆವೈಸಿ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದರು. ರಾಜ್ಯದ 8 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪೈಲೆಟ್ ಹಂತದ ಕಾರ್ಯಾರಂಭವಾಗಿದ್ದು, ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶ ಹೊಂದಿದೆ.

ತಂತ್ರಜ್ಞಾನದ ಬಳಕೆಯ ಮೂಲಕ ಪಡಿತರ ಸೇವೆಗಳಲ್ಲಿ ಪಾರದರ್ಶಕತೆ, ವೇಗ ಮತ್ತು ಸುಲಭತೆಯನ್ನು ಹೆಚ್ಚಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸುವ ಅವಕಾಶದಿಂದ ಪಡಿತರದಾರರಿಗೆ ನ್ಯಾಯಬೆಲೆ ಅಂಗಡಿಗಳ ಸುತ್ತಾಟವೂ ಕಡಿಮೆಯಾಗಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-10-01 17:10:04
No Reviews