ತವರಿನಲ್ಲಿ ರಶ್ಮಿಕಾಗೆ ಅದ್ದೂರಿ ಸ್ವಾಗತ – ತಂದೆಯಿಂದ ದುಬಾರಿ ಉಡುಗೊರೆ ಸರ್ಪ್ರೈಸ್

Rashmika Mandanna ಮತ್ತು Vijay Deverakonda ಮದುವೆಯ ಬಳಿಕ ಮೊದಲ ಬಾರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಗೆ ಆಗಮಿಸಿ ತವರಿನ ಸಂಭ್ರಮಕ್ಕೆ ಹೊಸ ಮೆರುಗು ತಂದಿದ್ದಾರೆ. ಏಪ್ರಿಲ್‌ 5ರಂದು ರಶ್ಮಿಕಾ ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಆತ್ಮೀಯವಾಗಿ ಆಚರಿಸಿಕೊಂಡರೆ, ಮರುದಿನ ಸಂಬಂಧಿಕರಿಗಾಗಿ ನಡೆದ ಅದ್ದೂರಿ ಔತಣಕೂಟದಲ್ಲಿ ಈ ಜೋಡಿ ಗಮನ ಸೆಳೆದಿತು. ಕೊಡವ ಶೈಲಿಯ ಸೀರೆ ತೊಟ್ಟ ರಶ್ಮಿಕಾ ಮತ್ತು ಕ್ಲಾಸಿಕ್‌ ಲುಕ್‌ನಲ್ಲಿ ಮಿಂಚಿದ ವಿಜಯ್‌—ಇವರಿಬ್ಬರ ಜೋಡಿ ಎಲ್ಲರ ಮನಸೆಳೆದಿದೆ.

ಫೆಬ್ರವರಿ 26ರಂದು ರಾಜಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ನಂತರ ಹೈದರಾಬಾದ್‌ನಲ್ಲಿ ಭರ್ಜರಿ ಆರತಕ್ಷತೆ ನಡೆಸಿಕೊಂಡಿತ್ತು. ಈಗ ಮದುವೆಯಾದ ಬಳಿಕ ಮೊದಲ ತವರು ಭೇಟಿ ಇನ್ನಷ್ಟು ವಿಶೇಷವಾಗಿದ್ದು, ಏಪ್ರಿಲ್‌ 4ರಂದೇ ಕುಟುಂಬದೊಂದಿಗೆ ಕದನೂರಿನ ನಿವಾಸಕ್ಕೆ ಆಗಮಿಸಿದ್ದರು. ಜೊತೆಗೆ ಕೊಡಗಿನ ಆರಾಧ್ಯ ದೈವವಾದ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಈ ಸಂಭ್ರಮದ ಮಧ್ಯೆ ಮತ್ತೊಂದು ವಿಶೇಷ ಕ್ಷಣ ಗಮನ ಸೆಳೆಯಿತು ಮಗಳ ಮೊದಲ ತವರು ಭೇಟಿಯ ನೆನಪಿಗಾಗಿ ತಂದೆ ಮದನ್ ಮಂದಣ್ಣ ಅವರು ಕದನೂರಿನ ಸೆರೆನಿಟಿ ಬಂಗಲೆಯನ್ನು ದುಬಾರಿ ಉಡುಗೊರೆಯಾಗಿ ನೀಡಿದರು. ಈಗಾಗಲೇ ಆಸ್ತಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಶ್ಮಿಕಾ ಹೆಸರಿಗೆ ಅಧಿಕೃತವಾಗಿ ವರ್ಗಾವಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೊಂದೆಡೆ, ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಜೋಡಿ, ಸೆಪ್ಟೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಜೊತೆಗೆ ರಶ್ಮಿಕಾ ಕಾಕ್‌ಟೇಲ್‌ 2 ಮೈಸಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ ವಿಜಯ್‌ ರೌಡಿ ಜನಾರ್ದನ ಚಿತ್ರದ ಮೂಲಕ ಮತ್ತೊಮ್ಮೆ ಸದ್ದು ಮಾಡಲು ಸಿದ್ಧರಾಗಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-07 11:26:55
No Reviews