ʻಪೆದ್ದಿʼ ಮೂಲಕ ಫಾರೀನ್ ಮಾರುಕಟ್ಟೆಗೆ ಹೊಂಬಾಳೆ ಫಿಲ್ಮ್ಸ್ ಎಂಟ್ರಿ

ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ Hombale Films ಇದೀಗ ಅಂತರರಾಷ್ಟ್ರೀಯ ವಿತರಣಾ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಸೇರಿದಂತೆ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಈಗಾಗಲೇ ಜಾಗತಿಕ ಗಮನ ಸೆಳೆದಿರುವ ಈ ಸಂಸ್ಥೆ, ಇದೀಗ ನಿರ್ಮಾಣದ ಜೊತೆಗೆ ವಿತರಣೆಯಲ್ಲಿಯೂ ತನ್ನ ಹಾದಿಯನ್ನು ವಿಸ್ತರಿಸಲು ಸಜ್ಜಾಗಿದೆ. ಈ ಮಹತ್ವದ ಹೆಜ್ಜೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರ ಸಾಥ್ ನೀಡಿದೆ.

ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್, ಇನ್ನು ಮುಂದೆ ಭಾರತೀಯ ಸಿನಿಮಾಗಳನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ತಲುಪಿಸುವ ಉದ್ದೇಶ ಹೊಂದಿದೆ. 2026ರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ಯ ವಿದೇಶಿ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿರುವ ಸಂಸ್ಥೆ, ಉತ್ತರ ಅಮೆರಿಕ, ಯುರೋಪ್ ಹಾಗೂ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲಿ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ.

‘ಉಪ್ಪೇನ’ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬುಚ್ಚಿ ಬಾಬು ಸಾನಾ ನಿರ್ದೇಶನದ ಈ ಚಿತ್ರವು ಕ್ರೀಡೆ ಮತ್ತು ರಾ ಆಕ್ಷನ್ ಹಿನ್ನೆಲೆಯ ಕಥೆಯನ್ನು ಹೊಂದಿದೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಹಿಂದೆಂದೂ ಕಾಣದ ಕಟ್ಟುಮಸ್ತಾದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಂಗೀತವನ್ನು ಆಸ್ಕರ್ ವಿಜೇತ ಎ.ಆರ್. ರೆಹಮಾನ್ ನೀಡಿದ್ದಾರೆ. ಜೊತೆಗೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರ ವಿಶೇಷ ಹಾಗೂ ಶಕ್ತಿಶಾಲಿ ಪಾತ್ರವೂ ಚಿತ್ರದ ಮತ್ತೊಂದು ಹೈಲೈಟ್ ಆಗಲಿದೆ.

ಜೂನ್ 4ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ‘ಪೆದ್ದಿ’ ಈಗಾಗಲೇ ಪೋಸ್ಟರ್ ಹಾಗೂ ರಾಮ್ ಚರಣ್ ಅವರ ಲುಕ್ ಮೂಲಕ ಭಾರಿ ಕುತೂಹಲ ಹುಟ್ಟಿಸಿದೆ. ಹೊಂಬಾಳೆ ಫಿಲ್ಮ್ಸ್‌ನ ಈ ಹೊಸ ಅಂತರರಾಷ್ಟ್ರೀಯ ಪ್ರಯತ್ನವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವ ನಿರೀಕ್ಷೆ ಹೆಚ್ಚಿಸಿದೆ.

ಈ ಮೂಲಕ ಹೊಂಬಾಳೆ ಫಿಲ್ಮ್ಸ್, ಕೇವಲ ನಿರ್ಮಾಣ ಸಂಸ್ಥೆಯಾಗಿ ಮಾತ್ರವಲ್ಲದೆ, ಜಾಗತಿಕ ಸಿನಿಮಾ ವಿತರಣಾ ಕ್ಷೇತ್ರದಲ್ಲೂ ತನ್ನದೇ ಆದ ಗುರುತನ್ನು ಮೂಡಿಸಲು ಮುಂದಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-14 18:12:23
No Reviews