ಪರಪ್ಪನ ಅಗ್ರಹಾರ ಜೈಲಿನಿಂದ ಫೋನ್ ಕರೆ; ವಿಡಿಯೋ ವೈರಲ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ; ವಿಡಿಯೋ ವೈರಲ್!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಸಿಸಿಬಿ ಪೊಲೀಸರ ದಾಳಿ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಪೊಲೀಸರ ತಪಾಸಣೆ ವೇಳೆ ಬ್ಯಾರಕ್‌ನಲ್ಲಿದ್ದ ಬಟ್ಟೆಗಳ ನಡುವೆ ಮೊಬೈಲ್ ಫೋನ್, ಸ್ಯಾನ್‌ಡಿಸ್ಕ್ ಪೆನ್‌ಡ್ರೈವ್, ಚಾರ್ಜರ್ ಹಾಗೂ ನೀಲಿ ಬಣ್ಣದ ಪಾಕೆಟ್ ನೋಟ್‌ಬುಕ್ ಪತ್ತೆಯಾಗಿದ್ದು, ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಜೈಲಿನಿಂದಲೇ ಫೋನ್ ಕರೆ?

ಮೊಬೈಲ್ ಪತ್ತೆಯಾದ ಬೆನ್ನಲ್ಲೇ, ಜೈಲಿನೊಳಗೆ ಪ್ರಜ್ವಲ್ ರೇವಣ್ಣ ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಯಾರೊಂದಿಗೋ ದೂರವಾಣಿ ಮೂಲಕ ಮಾತನಾಡುತ್ತಿರುವುದು ಕಂಡುಬಂದಿದೆ.

ವೈರಲ್ ವಿಡಿಯೋದಲ್ಲಿ, “ಹೊರಗಡೆ ಬಾ… ನಾನು ಅವರಿಗೆ ಫೋನ್ ಮಾಡಿಲ್ಲ. ನೀನು ಹೇಳಿದ ಮೇಲೆ ಮೊನ್ನೆ ಮಾಡಿದ್ದೆ…” ಎಂದು ಮಾತನಾಡಿರುವ ದೃಶ್ಯಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಆದರೆ ಅವರು ಯಾರಿಗೆ ಕರೆ ಮಾಡಿದ್ದರು, ಕರೆ ಹೇಗೆ ಸಾಧ್ಯವಾಯಿತು ಹಾಗೂ ಮೊಬೈಲ್ ಅವರಿಗೆ ಹೇಗೆ ತಲುಪಿತು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಜೈಲು ಅಧಿಕಾರಿಗಳಿಗೆ ನೋಟಿಸ್, ಸಿಬ್ಬಂದಿ ಅಮಾನತು

ಜೈಲಿನಲ್ಲಿ ನಿಷೇಧಿತ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ಅವರನ್ನು ಅಮಾನತುಗೊಳಿಸಲಾಗಿದೆ. ಜೈಲು ಎಸ್‌ಪಿ ಅನ್ಶುಕುಮಾರ್ ಅವರಿಗೂ ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿ, ಕರ್ತವ್ಯ ಲೋಪದ ಕುರಿತು ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಈ ನಡುವೆ ಪ್ರಜ್ವಲ್ ರೇವಣ್ಣ ಅವರನ್ನು ವಿಐಪಿ ಬ್ಯಾರಕ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ದರ್ಶನ್ ಬ್ಯಾರಕ್‌ಗೂ ತಪಾಸಣೆ

ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಇದ್ದ ಬ್ಯಾರಕ್‌ನಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆದರೆ ತಪಾಸಣೆ ವೇಳೆ ಯಾವುದೇ ಮೊಬೈಲ್ ಅಥವಾ ಇತರ ನಿಷೇಧಿತ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಈ ಹಿಂದೆ ಜೈಲಿನೊಳಗೆ ದರ್ಶನ್ ಸಹಚರ ಕೈದಿಗಳೊಂದಿಗೆ ಕುಳಿತು ಸಿಗರೇಟ್ ಸೇದುತ್ತಿರುವ ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಜೈಲಿನೊಳಗೆ ಮೊಬೈಲ್ ಪ್ರವೇಶಿಸಿದ ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜೈಲು ಭದ್ರತೆ ಹಾಗೂ ಅಧಿಕಾರಿಗಳ ಕರ್ತವ್ಯದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-13 10:05:20
No Reviews