ಪೊಲೀಸ್ ಕಂಪ್ಲೇಂಟ್’ ಟೀಸರ್‌ಗೆ ಪ್ರೇಮಾ ಚಾಲನೆ

ನಟಿ ವರಲಕ್ಷ್ಮೀ ಶರತ್‌ಕುಮಾರ್ ಮತ್ತು ರಾಗಿಣಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಪೊಲೀಸ್ ಕಂಪ್ಲೇಂಟ್’ ಚಿತ್ರದ ಟೀಸರ್ ಹಾಗೂ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಗೊಂಡಿವೆ. ಈ ಚಿತ್ರದ ಟೀಸರ್‌ನ್ನು ನಟಿ ಪ್ರೇಮಾ ಬಿಡುಗಡೆ ಮಾಡಿದ್ದರೆ, ಮೊದಲ ಹಾಡನ್ನು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಚಿತ್ರದಲ್ಲಿ ವರಲಕ್ಷ್ಮೀ ಮತ್ತು ರಾಗಿಣಿ ಎದುರು ನವೀನ್ ಚಂದ್ರ ಹಾಗೂ ಕೃಷ್ಣ ಸಾಯಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದು, ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಗಿಣಿ ದ್ವಿವೇದಿ, ಇದು ತಮ್ಮ ಸಿನಿಮಾ ಜೀವನದಲ್ಲಿ ವಿಭಿನ್ನ ಅನುಭವ ನೀಡಿದ ಸಿನಿಮಾ ಎಂದು ಹೇಳಿದ್ದಾರೆ. “ಈ ಕಥೆಯಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಷನ್ ಕೂಡ ಸಿನಿಮಾದಲ್ಲಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತದೆ ಎಂಬ ವಿಶ್ವಾಸ ಇದೆ” ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಪೂಜಾ ಗಾಂಧಿ ಅಭಿನಯದ ‘ಅನು’, ‘ದಂಡು’, ‘ಆಪ್ತ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂಜೀವ್ ಮೆಗೋಟಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಎಂ.ಎಸ್.ಕೆ ಪ್ರಮೀದಾಶ್ರೀ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಬಹುತೇಕ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಚಿತ್ರತಂಡ ಇದೀಗ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಸುಮಾರು ಹತ್ತು ವರ್ಷದ ಬಳಿಕ ಈ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಆ್ಯಕ್ಷನ್ ಹಾಗೂ ಹಾರರ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ “ನಾವು ಮಾಡಿದ ಕರ್ಮವೇ ನಮಗೆ ಹೇಗೆ ಹಿಂಬಾಲಿಸುತ್ತದೆ” ಎಂಬ ಅಂಶವನ್ನು ಪ್ರಮುಖವಾಗಿ ಹಿಡಿದು ಕಥೆಯನ್ನು ಹೆಣೆಯಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಎರಡೂ ಭಾಷೆಗಳ ಸೇರಿ ಸುಮಾರು 50ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಎರಡೂ ಭಾಷೆಗಳಲ್ಲಿ ಒಂದೇ ಸಮಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದಾಗಿದೆ.

ಇನ್ನೊಂದೆಡೆ, ತೆಲುಗು ಸಿನಿಮಾಗಳಲ್ಲಿ ಈಗಾಗಲೇ ಅಭಿನಯಿಸಿರುವ ನಟ ಕೃಷ್ಣ ಸಾಯಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. “ಈ ಸಿನಿಮಾದ ಕಥೆ ಮತ್ತು ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಕನ್ನಡದಲ್ಲಿ ನಾಯಕ ನಟನಾಗಿ ಪರಿಚಯವಾಗುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ” ಎಂದು ಅವರು ಹೇಳಿದ್ದಾರೆ. ಈ ಚಿತ್ರಕ್ಕೆ ಆರೋಹಣ ಸುಧೀಂದ್ರ ಸಂಗೀತ ನೀಡಿದ್ದು, ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣ ಮಾಡಿದ್ದಾರೆ.

ಒಟ್ಟಿನಲ್ಲಿ ಆ್ಯಕ್ಷನ್, ಹಾರರ್ ಮತ್ತು ಭಾವನೆಗಳನ್ನು ಒಟ್ಟುಗೂಡಿಸಿರುವ ‘ಪೊಲೀಸ್ ಕಂಪ್ಲೇಂಟ್’ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-16 13:59:55
No Reviews