‘ಪೆದ್ದಿ’ಯಲ್ಲಿ ಶಿವಣ್ಣನ ಸ್ಟೈಲ್ ನೋಡಿ ಅಭಿಮಾನಿಗಳು ಥ್ರಿಲ್

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಜೂನ್ 4ರಂದು ಅದ್ದೂರಿಯಾಗಿ ವಿಶ್ವದಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾದ ಗ್ಲಿಂಪ್ಸ್‌ಗಳಲ್ಲಿ ರಾಮ್ ಚರಣ್ ಅವರ ಶಕ್ತಿಶಾಲಿ ಅವತಾರ ನೋಡಿ ಅಭಿಮಾನಿಗಳು ಉತ್ಸಾಹದಿಂದ ಕಾದಿದ್ದಾರೆ.

ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ‘ಗೌರ್‌ನಾಯ್ಡು’ ಲುಕ್ ಈಗಾಗಲೇ ಕುತೂಹಲಕ್ಕೆ ತೆರೆ ಎಳೆದಿದೆ. ಕುಸ್ತಿ ಅಖಾಡದಲ್ಲಿ ಶಿವಣ್ಣನ ಮಾಸ್ ಪ್ರೆಸೆನ್ಸ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮೇಕಿಂಗ್ ವಿಡಿಯೋದಲ್ಲಿ ರಾಮ್ ಚರಣ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಕಾಣಿಸಿಕೊಂಡ ಕ್ಷಣಗಳು ಅಭಿಮಾನಿಗಳಿಗೆ ಥ್ರಿಲ್ ನೀಡಿವೆ.

‘ಉಪ್ಪೆನ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಜಗಪತಿ ಬಾಬು, ದಿವೇಂದು ಶರ್ಮಾ ಸೇರಿದಂತೆ ಹಲವು ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಚಿತ್ರವನ್ನು ‘ವೃದ್ಧಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ಸಂಸ್ಥೆಗಳು ಸಹ ನಿರ್ಮಾಣಕ್ಕೆ ಬೆಂಬಲ ನೀಡಿವೆ. ಆರ್. ರತ್ನವೇಲು ಅವರ ಛಾಯಾಗ್ರಹಣ ಮತ್ತು ನವೀನ್ ನೂಲಿ ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ.

ಕನ್ನಡದಲ್ಲಿಯೂ ಡಬ್ ಆಗಿ ಬಿಡುಗಡೆ ಆಗುತ್ತಿರುವ ‘ಪೆದ್ದಿ’ ಕರ್ನಾಟಕದಲ್ಲಿಯೂ ಭಾರೀ ನಿರೀಕ್ಷೆ ಮೂಡಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-15 16:47:28
No Reviews