ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ನಾಳೆ: ಧಾರ್ಮಿಕ ಉಡುಪುಗಳ ಬಗ್ಗೆ ಗೃಹಸಚಿವರ ಸ್ಪಷ್ಟನೆ!

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್‌ 2ರಂದು ನಡೆಯಲಿರುವ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ಕುರಿತು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಧಾರ್ಮಿಕ ಉಡುಪುಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, "ಪಾರದರ್ಶಕತೆಯೇ ನಮ್ಮ ಬದ್ಧತೆ. ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಸಲು ರಾಜ್ಯ ಸರ್ಕಾರ ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ" ಎಂದು ಹೇಳಿದ್ದಾರೆ.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತರಬಹುದಾದ ಹಾಗೂ ತರಬಾರಾದ ವಸ್ತುಗಳ ಸಂಪೂರ್ಣ ಪಟ್ಟಿಯನ್ನು ಈಗಾಗಲೇ ಹಾಲ್‌ ಟಿಕೆಟ್‌ನಲ್ಲಿ ಪ್ರಕಟಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ವಸ್ತ್ರಸಂಹಿತೆ ಹಾಗೂ ಪರೀಕ್ಷಾ ನಿಯಮಗಳನ್ನು ಪಾಲಿಸುವಂತೆ ಸಚಿವರು ಮನವಿ ಮಾಡಿದ್ದಾರೆ.

ಧಾರ್ಮಿಕ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ 2 ಗಂಟೆ 30 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ವಸ್ತ್ರಸಂಹಿತೆ ಅಧಿಕಾರಿಗಳಿಂದ ತಪಾಸಣೆಗೆ ಒಳಗಾಗಬೇಕು. ಬಳಿಕ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.

ಯಾವುದೇ ವದಂತಿ ಅಥವಾ ಗೊಂದಲಗಳಿಗೆ ಕಿವಿಗೊಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಉದ್ಯೋಗಾಕಾಂಕ್ಷಿಗಳಿಗೆ ಪ್ರಿಯಾಂಕ್‌ ಖರ್ಗೆ ಶುಭ ಹಾರೈಸಿದ್ದಾರೆ.

ಪರೀಕ್ಷೆಯಲ್ಲಿ ಧರಿಸಲು ಅನುಮತಿ ಇರುವ ವಸ್ತುಗಳು

  • ಜನಿವಾರ

  • ಶಿವಧಾರ / ಲಿಂಗ

  • ಸೊಂಟದ ದಾರ

  • ತಾಯತ

  • ರುದ್ರಾಕ್ಷಿ

  • ಮಾಂಗಲ್ಯ ಸರ

  • ಕೈಬಳೆಗಳು

  • ಮೂಗುತಿ

  • ಕಾಲುಂಗುರ ಮತ್ತು ಕಾಲುಗೆಜ್ಜೆ

  • ಕುಂಕುಮ / ಹಣೆಬೊಟ್ಟು

  • ಉಂಗುರ

  • ಕೈಗೆ ಕಟ್ಟುವ ಧಾರ್ಮಿಕ ದಾರಗಳು

ಪರೀಕ್ಷಾ ಕೇಂದ್ರದಲ್ಲಿ ಸಂಪೂರ್ಣ ನಿಷೇಧಿತ ವಸ್ತುಗಳು

ಎಲೆಕ್ಟ್ರಾನಿಕ್ ಸಾಧನಗಳು:
ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕೈಗಡಿಯಾರ, ಇಯರ್‌ಫೋನ್‌, ಮೈಕ್ರೋಫೋನ್‌, ಪೇಜರ್‌, ಮೈಕ್ರೋಚಿಪ್‌, ಕ್ಯಾಮೆರಾ, ಪೆನ್‌ಡ್ರೈವ್‌, ಎಲೆಕ್ಟ್ರಾನಿಕ್ ಪೆನ್‌, ಸ್ಕ್ಯಾನರ್‌.

ಇತರೆ ವಸ್ತುಗಳು:
ಪುಸ್ತಕಗಳು, ಚೀಟಿಗಳು, ಜ್ಯಾಮಿಟ್ರಿ ಬಾಕ್ಸ್‌, ಪ್ಲಾಸ್ಟಿಕ್ ಪೌಚ್‌, ಕ್ಯಾಲ್ಕುಲೇಟರ್‌, ಸ್ಕೇಲ್‌, ಲಾಗ್ ಟೇಬಲ್‌, ಎರೇಸರ್‌, ಆಹಾರ ಪದಾರ್ಥಗಳು, ನೀರು ಅಥವಾ ಪಾನೀಯ ಬಾಟಲಿಗಳು, ಬ್ಯಾಗ್‌, ಪರ್ಸ್‌, ಶೂ, ಬೂಟು, ಕ್ಯಾಪ್‌, ಮುಖ ಮುಚ್ಚುವ ಉಡುಪು ಹಾಗೂ ಹೆಚ್ಚು ಪಾಕೆಟ್‌ಗಳಿರುವ ಜೀನ್ಸ್‌ ಪ್ಯಾಂಟ್‌ಗಳಿಗೆ ಅವಕಾಶ ಇರುವುದಿಲ್ಲ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹಾಲ್‌ ಟಿಕೆಟ್‌ನಲ್ಲಿರುವ ಸೂಚನೆಗಳನ್ನು ಮುಂಚಿತವಾಗಿ ಓದಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಮನವಿ ಮಾಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-01 16:20:09
No Reviews