ಸರ್ಸೆ ಸರ್ಸೆ ಹಾಡೇ ವಿವಾದಕ್ಕೆ ಕಾರಣವಾ?

‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಸೆ ಸರ್ಸೆ’ ಹಾಡು ಸೃಷ್ಟಿಸಿದ ವಿವಾದ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ನಟಿ ನೋರಾ ಫತೇಹಿಗೆ ರಾಷ್ಟ್ರೀಯ ಮಹಿಳಾ ಆಯೋಗ (NCW) ನೋಟಿಸ್ ಜಾರಿಗೊಳಿಸಿತ್ತು. ವಿದೇಶ ಪ್ರವಾಸದಲ್ಲಿದ್ದ ಕಾರಣ ಮೊದಲ ಬಾರಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ನೋರಾ, ಗುರುವಾರ ದೆಹಲಿಯಲ್ಲಿ ಆಯೋಗದ ಮುಂದೆ ಹಾಜರಾಗಿ ತಮ್ಮ ಸ್ಪಷ್ಟನೆ ನೀಡಿದ್ದಾರೆ.

ವಿಚಾರಣೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನೋರಾ, “ಯಾರ ಭಾವನೆಗೂ ನೋವುಂಟು ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ. ಕಲಾವಿದೆಯಾಗಿ ನನ್ನ ಜವಾಬ್ದಾರಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ,” ಎಂದು ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಲಿಖಿತ ಕ್ಷಮೆಯಾಚನೆ ಸಲ್ಲಿಸಿರುವುದನ್ನೂ ಅವರು ಬಹಿರಂಗಪಡಿಸಿದರು.

ಈ ಹಿಂದೆ ನೋರಾ ಫತೇಹಿ, ತಾವು ಕೇವಲ ಕನ್ನಡ ಆವೃತ್ತಿಯ ಹಾಡಿಗೆ ಮಾತ್ರ ಚಿತ್ರೀಕರಣ ಮಾಡಿದ್ದೆ ಎಂದು ಸ್ಪಷ್ಟಪಡಿಸಿದ್ದರು. ಹಿಂದಿ ಆವೃತ್ತಿಯ ಸಾಹಿತ್ಯದ ಬಗ್ಗೆ ತಮ್ಮ ಒಪ್ಪಿಗೆ ಪಡೆಯದೇ ಬದಲಾವಣೆ ಮಾಡಲಾಗಿದೆ ಎಂದು ಹೇಳಿಕೊಂಡ ಅವರು, ವಿವಾದಿತ ಸಾಲುಗಳ ಬಗ್ಗೆ ತಿಳಿದಾಗ ತಾನೂ ಅಚ್ಚರಿಗೊಂಡಿದ್ದೇನೆ ಎಂದು ಇನ್‌ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದರು.

ಇದೇ ವಿವಾದಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಕೂಡ ಕಳೆದ ತಿಂಗಳು NCW ಮುಂದೆ ಹಾಜರಾಗಿ ವಿಷಾದ ವ್ಯಕ್ತಪಡಿಸಿದ್ದರು. ಮಹಿಳೆಯರ ಘನತೆಗೆ ಧಕ್ಕೆ ಬಾರದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದಾಗಿ ಅವರು ಭರವಸೆ ನೀಡಿದ್ದರು. ಜೊತೆಗೆ, 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ನಿರ್ಧಾರವೂ ಗಮನ ಸೆಳೆದಿತ್ತು.

‘ಸರ್ಸೆ ಸರ್ಸೆ’ ಹಾಡಿನ ಮೂಲ ಕನ್ನಡ ಆವೃತ್ತಿಯನ್ನು ನಿರ್ದೇಶಕ ಪ್ರೇಮ್ ಬರೆದಿದ್ದರೆ, ಹಿಂದಿ ಆವೃತ್ತಿಯ ಸಾಹಿತ್ಯವನ್ನು ರಕೀಬ್ ಆಲಂ ರಚಿಸಿದ್ದರು. ಆದರೆ ವಿವಾದ ತೀವ್ರವಾದ ನಂತರ ಅವರು ಕೂಡ ಈ ಹಾಡಿನಿಂದ ದೂರ ಉಳಿದಿದ್ದಾರೆ. ಇದೀಗ ಈ ವಿವಾದ ಸಿನಿ ವಲಯದಲ್ಲಿ ಮಹಿಳೆಯರ ಗೌರವ, ಜವಾಬ್ದಾರಿ ಮತ್ತು ಸೃಜನಾತ್ಮಕ ಸ್ವಾತಂತ್ರ್ಯದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-07 18:07:44
No Reviews