ಮೆಟ್ರೋ ಪ್ರಯಾಣದ ಹೃದಯಸ್ಪರ್ಶಿ ಘಟನೆ,ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಯುವತಿಯ ಅನುಭವ

ಬೆಂಗಳೂರು: ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಸಾಮಾನ್ಯವಾಗಿ ಅಸುರಕ್ಷತೆ ಮತ್ತು ಕಳ್ಳತನದ ಘಟನೆಗಳು ಸುದ್ದಿಯಾಗುತ್ತಿರುತ್ತವೆ. ಆದರೆ, ಕೆಲವೊಮ್ಮೆ ಇವೇ ಸ್ಥಳಗಳು ಮಾನವೀಯತೆಯ ಸುಂದರ ಕ್ಷಣಗಳಿಗೂ ಸಾಕ್ಷಿಯಾಗುತ್ತವೆ. ಅಂತಹದೇ ಒಂದು ಹೃದಯಸ್ಪರ್ಶಿ ಅನುಭವವನ್ನು ಯುವತಿ ರಿತು ಜೂನ್ ಸಾಮಾಜಿಕ ಜಾಲತಾಣ ಎಕ್ಸ್‌ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದು, ಅದು ಇದೀಗ ವ್ಯಾಪಕವಾಗಿ ವೈರಲ್ ಆಗಿದೆ.

ರಿತು ಜೂನ್ ಅವರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮ ಪಕ್ಕದಲ್ಲಿ ಕುಳಿತಿದ್ದ ಯುವತಿಯ ಕೈಯಲ್ಲಿದ್ದ ಆಕರ್ಷಕ ವಿನ್ಯಾಸದ ಬಳೆಯನ್ನು ಗಮನಿಸಿದ್ದಾರೆ. ಬಳೆಯ ವಿನ್ಯಾಸ ಅವರಿಗೆ ತುಂಬಾ ಇಷ್ಟವಾಗಿದ್ದು, ಅದೇ ರೀತಿಯ ಮತ್ತೊಂದು ಬಳೆ ತಯಾರಿಸಿಕೊಳ್ಳಲು ಫೋಟೋ ತೆಗೆದುಕೊಳ್ಳಬಹುದೇ ಎಂದು ಅವರು ಆ ಯುವತಿಯನ್ನು ಕೇಳಿದ್ದಾರೆ.

ಫೋಟೋ ತೆಗೆದುಕೊಳ್ಳಲು ಅನುಮತಿ ನೀಡುವ ನಿರೀಕ್ಷೆಯಲ್ಲಿದ್ದ ರಿತುಗೆ, ಆ ಅಪರಿಚಿತ ಯುವತಿಯ ಪ್ರತಿಕ್ರಿಯೆ ಅಚ್ಚರಿಯನ್ನುಂಟು ಮಾಡಿತು. ಆ ಯುವತಿ ತಕ್ಷಣವೇ ತನ್ನ ಕೈಯಲ್ಲಿದ್ದ ಬಳೆಯನ್ನು ತೆಗೆದು, “ಇದನ್ನು ನೇರವಾಗಿ ನೋಡಿದರೆ ಅಕ್ಕಸಾಲಿಗನಿಗೆ ಮಾಡಲು ಸುಲಭವಾಗುತ್ತದೆ” ಎಂದು ಹೇಳಿ ರಿತು ಕೈಗೆ ಕೊಟ್ಟಿದ್ದಾರೆ.

ಇದೇ ವೇಳೆ, ಆ ಬಳೆ ನಿಜವಾದ ಚಿನ್ನದದ್ದಲ್ಲ ಎಂದು ಆ ಯುವತಿ ಸ್ಪಷ್ಟಪಡಿಸಿದ್ದು, ಅವರ ಸರಳತೆ ಮತ್ತು ದಯಾಳುತನ ರಿತು ಮನಸ್ಸನ್ನು ತುಂಬಾ ಸ್ಪರ್ಶಿಸಿದೆ. ಈ ನೆನಪಿಗಾಗಿ ಆ ಬಳೆಯನ್ನು ಸದಾ ಇಟ್ಟುಕೊಳ್ಳಲು ತಾನು ನಿರ್ಧರಿಸಿದ್ದಾಗಿ ರಿತು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಎಲ್ಲಾ ಮೆಟ್ರೋ ಪ್ರಯಾಣಗಳು ಕೆಟ್ಟ ಅನುಭವವನ್ನು ನೀಡುವುದಿಲ್ಲ” ಎಂಬ ಸಂದೇಶವನ್ನು ಇದು ನೀಡುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.


 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-16 19:08:14
No Reviews