ಮೆಟ್ರೋ ಪ್ರಯಾಣಿಕರೇ ಎಚ್ಚರ – ಮೇ 10ರಂದು ನೇರಳೆ ಮಾರ್ಗದಲ್ಲಿ ವ್ಯತ್ಯಯ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL), ಮೇ 10ರಂದು ನೇರಳೆ ಮಾರ್ಗದ ಕೆಲವು ಭಾಗಗಳಲ್ಲಿ ತಾತ್ಕಾಲಿಕ ಸೇವಾ ವ್ಯತ್ಯಯ ಇರುವುದಾಗಿ ತಿಳಿಸಿದೆ. ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಮೆಟ್ರೋ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ (ಸೆಂಟ್ರಲ್ ಕಾಲೇಜು) ನಡುವಿನ ಭಾಗದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ. ಇದರ ಪರಿಣಾಮವಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ–ಹೊಸಹಳ್ಳಿ ಹಾಗೂ ಕಬ್ಬನ್ ಪಾರ್ಕ್ ನಡುವಿನ ಮಾರ್ಗದಲ್ಲಿ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

ಉಳಿದ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ಸಂಚರಿಸಲಿದ್ದು, ಬೆಳಿಗ್ಗೆ 9 ಗಂಟೆಯ ಬಳಿಕ ಸಂಪೂರ್ಣ ನೇರಳೆ ಮಾರ್ಗದಲ್ಲಿ ಸೇವೆ ಪುನರಾರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಹೆಚ್ಚುವರಿ ಮಾಹಿತಿ ಫಲಕಗಳು, ಪ್ರಕಟಣೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಲಾಗುತ್ತಿದೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಹಿನ್ನೆಲೆ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಕೂಡ ಜಾರಿಯಲ್ಲಿರಲಿದೆ. ಬೆಳಿಗ್ಗೆ 5ರಿಂದ ಮಧ್ಯಾಹ್ನ 3ರವರೆಗೆ ಹೆಚ್.ಎ.ಎಲ್ ಗೇಟ್ ನಂ.30 ಸುತ್ತಮುತ್ತ ಟ್ರಾಫಿಕ್ ನಿಯಂತ್ರಣ ಕ್ರಮ ಜಾರಿಯಾಗಲಿದ್ದು, ಸಾರ್ವಜನಿಕರು ಮುಂಚಿತವಾಗಿ ಪ್ರಯಾಣ ಯೋಜನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-09 14:49:56
No Reviews