ರೋಮ್‌ನಲ್ಲಿ ಮೋದಿ–ಮೆಲೋನಿ ಭೇಟಿ: ಸೆಲ್ಫಿ ಹಂಚಿಕೊಂಡ ಇಟಲಿ ಪ್ರಧಾನಿ

ರೋಮ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಟಲಿಯ ರೋಮ್‌ಗೆ ಆಗಮಿಸಿದ್ದು, ಈ ಭೇಟಿ ಭಾರತ–ಇಟಲಿ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಅಧ್ಯಾಯ ತೆರೆಯಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಯನ್ನು ಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಂದ ಆತ್ಮೀಯ ಸ್ವಾಗತ ದೊರೆಯಿತು.

ಭೇಟಿಯ ನಂತರ ಮೆಲೋನಿ ಅವರು ಮೋದಿಯೊಂದಿಗೆ ಸೆಲ್ಫಿ ಹಂಚಿಕೊಂಡು “ವೆಲ್‌ಕಮ್ ಟು ರೋಮ್, ಮೈ ಫ್ರೆಂಡ್” ಎಂದು ಬರೆಯುತ್ತಿದ್ದಂತೆ, ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಲಕ್ಷಾಂತರ ವೀಕ್ಷಣೆಗಳು, ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡ ಈ ಚಿತ್ರ ಈಗ ಟ್ರೆಂಡಿಂಗ್‌ನಲ್ಲಿದೆ. ಮೋದಿ ಆಗಮನದ ವೇಳೆ ಅನಿವಾಸಿ ಭಾರತೀಯರಿಂದಲೂ ಉತ್ಸಾಹಭರಿತ ಸ್ವಾಗತ ದೊರಕಿದೆ.

ಈ ಭೇಟಿಯ ವೇಳೆ ಭಾರತ ಮತ್ತು ಇಟಲಿ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ. ರಕ್ಷಣಾ, ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ ಇದೆ. ಇದೇ ವೇಳೆ ಇಟಾಲಿಯನ್ ಆಡಳಿತವು ರೋಮ್ ನಗರದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರಧಾನಿ ಮೋದಿ ಅವರು ರೋಮ್‌ನ ಪಿಯಾಝಾ ಡೆಲ್ಲಾ ರಿಪಬ್ಲಿಕಾ ಪ್ರದೇಶದಲ್ಲಿರುವ ಅನಂತರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇಟಲಿ ಭೇಟಿಯ ಸಂದರ್ಭದಲ್ಲಿ ವಾರಣಾಸಿಯ ಐತಿಹಾಸಿಕ ಘಾಟ್‌ಗಳನ್ನು ಚಿತ್ರಿಸುವ ವಿಶೇಷ ಕಲಾಕೃತಿಯನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲಾಗಿದೆ. ಈ ಕಲಾಕೃತಿ ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಜೂನ್ 2024ರಲ್ಲಿ ಜಿ-7 ಶೃಂಗಸಭೆಗೆ ಭಾಗವಹಿಸಿದ್ದ ಬಳಿಕ ಇದು ಅವರ ಮತ್ತೊಂದು ಪ್ರಮುಖ ಇಟಲಿ ಭೇಟಿ ಆಗಿದೆ.

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-20 14:41:49
No Reviews