ಶಾಸ್ತ್ರೋಕ್ತ ವಿಧಿವಿಧಾನಗಳಿಲ್ಲದೆ ನಡೆದ ಮದುವೆ ಅಮಾನ್ಯ: ಸುಪ್ರೀಂ ಕೋರ್ಟ್ ಸ್ಪಷ್ಟನೆ!

ಇತ್ತೀಚಿನ ದಿನಗಳಲ್ಲಿ ವೀಸಾ, ಉದ್ಯೋಗ ಅಥವಾ ಇತರ ಪ್ರಾಯೋಗಿಕ ಉದ್ದೇಶಗಳಿಗಾಗಿ ಮದುವೆಯಾಗುವ ಮೊದಲುಲೇ ವಿವಾಹ ನೋಂದಣಿ ಪ್ರಮಾಣಪತ್ರ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಶಾಸ್ತ್ರೋಕ್ತ ವಿಧಿವಿಧಾನಗಳಿಲ್ಲದೆ ನಡೆದ ಮದುವೆಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹಿಂದೂ ಸಂಪ್ರದಾಯದ (Hindu rituals) ಅನುಸಾರವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯದ ಮದುವೆಯನ್ನು ಹಿಂದೂ ಮದುವೆ (Hindu Marriage) ಎಂದು ಕರೆಯಲು ಸಾಧ್ಯವಿಲ್ಲ. ಕೇವಲ ಮದುವೆ ನೋಂದಣಿ ಪ್ರಮಾಣಪತ್ರ (marriage certificate) ಇರುವುದರಿಂದಲೇ ಮದುವೆ ಕಾನೂನಾತ್ಮಕವಾಗಿ ಸಿಂಧು ಆಗುವುದಿಲ್ಲ. ಇಂತಹ ನೋಂದಣಿ ಒಂದು ಪುರಾವೆಯಷ್ಟೇ ಹೊರತು ಮದುವೆಯ ಪರ್ಯಾಯವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಡಾಲಿ ರಾಣಿ ಮತ್ತು ಮನೀಶ್ ಕುಮಾರ್ ಅವರ ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ, ಹಿಂದೂ ವಿವಾಹವು ಕೇವಲ ವಹಿವಾಟು ಒಪ್ಪಂದವಾಗಲಿ ಅಥವಾ ಸರಳ ಕಾರ್ಯಕ್ರಮವಾಗಲಿ ಅಲ್ಲ, ಅದು ಪವಿತ್ರ ಸಂಸ್ಕಾರ ಎಂದು ತಿಳಿಸಿದೆ. ಮದುವೆ ನೋಂದಣಿ ಪ್ರಮಾಣಪತ್ರ ಪಡೆದಿರುವುದರಿಂದ ಮಾತ್ರ ಪುರುಷ ಮತ್ತು ಮಹಿಳೆ ಕಾನೂನಾತ್ಮಕವಾಗಿ ಪತಿ-ಪತ್ನಿಯಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಮದುವೆ ಮಾನ್ಯವಾಗಬೇಕಾದರೆ ನಿರ್ದಿಷ್ಟ ಧಾರ್ಮಿಕ ವಿಧಿವಿಧಾನಗಳು ನಡೆಯಲೇಬೇಕು. ಅದರಲ್ಲೂ ವಿಶೇಷವಾಗಿ ಸಪ್ತಪದಿ ವಿಧಿಯು ಅತ್ಯಂತ ಮುಖ್ಯವಾಗಿದ್ದು, ಅದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಪೈಲೆಟ್‌ಗಳಾದ ಡಾಲಿ ರಾಣಿ ಮತ್ತು ಮನೀಶ್ ಕುಮಾರ್ ಅವರು ಖಾಸಗಿ ಸಂಸ್ಥೆಯೊಂದರಿಂದ ಮದುವೆ ಪ್ರಮಾಣಪತ್ರ ಪಡೆದಿದ್ದರು. ನಂತರ ಭಿನ್ನಾಭಿಪ್ರಾಯಗಳು ಉಂಟಾಗಿ ವಿಚ್ಛೇದನ ಪಡೆಯಲು ಅವರು ನ್ಯಾಯಾಲಯದ ಮೊರೆ ಹೋದರು. ಪ್ರಕರಣದ ವಿಚಾರಣೆ ವೇಳೆ, ಅವರಿಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿಲ್ಲ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ, ಇದನ್ನು ಮದುವೆಯೇ ಅಲ್ಲ ಎಂದು ನ್ಯಾಯಪೀಠ ತೀರ್ಮಾನಿಸಿತು. ಸಂವಿಧಾನದ 142ನೇ ವಿಧಿಯಡಿ ವಿಶೇಷ ಅಧಿಕಾರ ಬಳಸಿದ ನ್ಯಾಯಾಲಯ, ಮದುವೆಯೇ ನಡೆದಿಲ್ಲ ಎಂದು ಘೋಷಿಸಿ ಪ್ರಕರಣವನ್ನು ವಜಾಗೊಳಿಸಿತು.

ಹಿಂದೂ ಮದುವೆ ನಿಯಮವೇನು?
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಧಾರ್ಮಿಕ ವಿಧಿವಿಧಾನಗಳು, ಅದರಲ್ಲೂ ಮುಖ್ಯವಾಗಿ ಸಪ್ತಪದಿ ನಡೆಯಬೇಕು. ಮದುವೆ ನೋಂದಣಿ ಪ್ರಮಾಣಪತ್ರ ಕೇವಲ ದಾಖಲೆ ಅಥವಾ ಪುರಾವೆಯಾಗಿ ಮಾತ್ರ ಪರಿಗಣಿಸಲಾಗುತ್ತದೆ. ವೀಸಾ, ಬ್ಯಾಂಕ್ ಖಾತೆ ಅಥವಾ ಇತರ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಮದುವೆ ಪ್ರಮಾಣಪತ್ರ ಪಡೆಯುವುದು ಕಾನೂನುಬಾಹಿರವಾಗಿದೆ ಮತ್ತು ಅದನ್ನು ವಿವಾಹವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-05 14:01:44
No Reviews