ಕೋಲಾರದಲ್ಲಿ ದೇಶದ ಮೊದಲ ಹೆಲಿಕಾಪ್ಟರ್ ಘಟಕಕ್ಕೆ Narendra Modi ಚಾಲನೆ

ಈ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ Rajnath Singh ಹಾಗೂ ಫ್ರಾನ್ಸ್ ರಕ್ಷಣಾ ಸಚಿವೆ Catherine Vautrin ಖುದ್ದು ವೇಮಗಲ್‌ಗೆ ಆಗಮಿಸಿ ಭಾಗವಹಿಸಲಿದ್ದಾರೆ. ಇದರ ಹಿನ್ನೆಲೆಯಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಎಂ.ಆರ್. ರವಿ ಹಾಗೂ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ವರ್ಷಕ್ಕೆ 10 ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯ

ಸುಮಾರು 16 ಎಕರೆ ವಿಸ್ತೀರ್ಣದಲ್ಲಿ Tata Advanced Systems Limited ವತಿಯಿಂದ ನಿರ್ಮಾಣಗೊಂಡಿರುವ ಈ ಘಟಕ, ದೇಶದ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದ್ದು, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹೆಲಿಕಾಪ್ಟರ್‌ಗಳ ಉತ್ಪಾದನೆಯೂ ಇಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಗಳೂ ರೂಪುಗೊಂಡಿವೆ.

ಕೈಗಾರಿಕಾ ಬೆಳವಣಿಗೆಗೆ ಹೊಸ ಉಸಿರು

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪವಿರುವುದು ವೇಮಗಲ್ ಕೈಗಾರಿಕಾ ಪ್ರದೇಶವನ್ನು ಆಯ್ಕೆಮಾಡಲು ಪ್ರಮುಖ ಕಾರಣವಾಗಿದೆ. ಈ ಘಟಕ ಆರಂಭದಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಕೋಲಾರ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ಸಿಗಲಿದೆ. ರಾಷ್ಟ್ರಮಟ್ಟದಲ್ಲಿ ಕೋಲಾರದ ಹೆಗ್ಗಳಿಕೆಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿ ಇದು ಗುರುತಿಸಿಕೊಳ್ಳಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-17 12:41:04
No Reviews