ಪೆಟ್ರೋಲ್ ಬಂಕ್‌ಗಳಲ್ಲಿ ಸೀಮೆಎಣ್ಣೆ ಮಾರಾಟ

ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾದ ಅನಿಶ್ಚಿತತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಈ ಮಹತ್ವದ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದೆ. ಮುಂದಿನ 60 ದಿನಗಳವರೆಗೆ ಅಥವಾ ಹೊಸ ಆದೇಶ ಬರುವವರೆಗೆ ಇದು ಚಾಲ್ತಿಯಲ್ಲಿರಲಿದೆ. ಅಗತ್ಯವಿರುವ ಕುಟುಂಬಗಳಿಗೆ ಅಡುಗೆ ಇಂಧನದ ಲಭ್ಯತೆ ಖಚಿತಪಡಿಸಲು ಸಂಗ್ರಹಣೆ ಮತ್ತು ಪರವಾನಗಿ ನಿಯಮಗಳಲ್ಲಿ ವಿಶೇಷ ಸಡಿಲಿಕೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಗರಿಷ್ಠ ಎರಡು ಪೆಟ್ರೋಲ್ ಬಂಕ್‌ಗಳನ್ನು ಸೀಮೆಎಣ್ಣೆ ಮಾರಾಟಕ್ಕೆ ಗುರುತಿಸಲು ಅವಕಾಶ ನೀಡಲಾಗಿದ್ದು, ಪ್ರತಿಯೊಂದು ಮಳಿಗೆಯು 5,000 ಲೀಟರ್‌ವರೆಗೆ ಸಂಗ್ರಹಿಸಬಹುದು. ಸಾರ್ವಜನಿಕ ವಲಯದ ತೈಲ ಕಂಪನಿಗಳ ನಿಯಂತ್ರಣದಲ್ಲಿರುವ ಬಂಕ್‌ಗಳಿಗೆ ವಿತರಣೆಯಲ್ಲಿ ಆದ್ಯತೆ ನೀಡಲಾಗುತ್ತದೆ.

ಸಾರಿಗೆ ಮತ್ತು ವಿತರಣೆಯನ್ನು ವೇಗಗೊಳಿಸಲು ಡೀಲರ್ ಹಾಗೂ ಟ್ಯಾಂಕ್ ವಾಹನಗಳ ಪರವಾನಗಿ ನಿಯಮಗಳನ್ನೂ ಸಡಿಲಿಸಲಾಗಿದೆ. ಕಳೆದ ದಶಕದಲ್ಲಿ ಎಲ್‌ಪಿಜಿ ಬಳಕೆಯ ಹೆಚ್ಚಳದಿಂದ ಹಲವು ರಾಜ್ಯಗಳಲ್ಲಿ ಸೀಮೆಎಣ್ಣೆ ಪೂರೈಕೆ ನಿಲ್ಲಿಸಲಾಗಿತ್ತು. ಆದರೆ ಪ್ರಸ್ತುತ ಜಾಗತಿಕ ಪರಿಸ್ಥಿತಿಯಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ, ಗ್ರಾಮೀಣ ಮತ್ತು ಅರೆ-ನಗರ ಪ್ರದೇಶದ ಜನರಿಗೆ ಪರ್ಯಾಯ ಇಂಧನ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಸೀಮೆಎಣ್ಣೆಯನ್ನು ಅಡುಗೆ ಮತ್ತು ಬೆಳಕಿನ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-30 16:53:58
No Reviews