ಸ್ಟ್ರೆಚರ್‌ನಲ್ಲೇ ಪರೀಕ್ಷೆ ಬರೆದ ವಿವಿದ್ಯಾರ್ಥಿನಿಗೆ ಉತ್ತಮ ಅಂಕ

ಕೋಲಾರ, ಏ.23: ಜೀವನದಲ್ಲಿ ಎಷ್ಟು ದೊಡ್ಡ ಸವಾಲು ಬಂದರೂ ಹಿಂಜರಿಯದೇ ಹೋರಾಡಿದರೆ ಯಶಸ್ಸು ಖಚಿತ ಎಂಬುದನ್ನು ಕೋಲಾರ ಜಿಲ್ಲೆಯ ವಿದ್ಯಾರ್ಥಿನಿ ಕುಸುಮಾ ತನ್ನ ಬದುಕಿನ ಮೂಲಕ ಸಾಬೀತುಪಡಿಸಿದ್ದಾಳೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೆಲವೇ ದಿನಗಳ ಮುನ್ನ ಭೀಕರ ಅಪಘಾತಕ್ಕೊಳಗಾಗಿ ಒಂದು ಕಾಲು ಕಳೆದುಕೊಂಡಿದ್ದರೂ, ಆಕೆ ತನ್ನ ಗುರಿಯನ್ನು ಬಿಡಲಿಲ್ಲ. ಆಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಪರೀಕ್ಷೆ ಬರೆಯಬೇಕೆಂಬ ದೃಢಸಂಕಲ್ಪದಿಂದ ಆಂಬ್ಯುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಸ್ಟ್ರೆಚರ್‌ನಲ್ಲೇ ಮಲಗಿಕೊಂಡು ಪರೀಕ್ಷೆ ಬರೆದಿದ್ದಳು.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಿನ್ನನಾಗಹಳ್ಳಿ ನಿವಾಸಿ ಹಾಗೂ ಸೆಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿಯಾದ ಕುಸುಮಾ, ನೋವಿನ ನಡುವೆಯೂ ಅಧ್ಯಯನವನ್ನು ಮುಂದುವರಿಸಿದಳು. ವೈದ್ಯರು ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿಯೇ ಪರೀಕ್ಷೆ ದಿನ ಬಂದಾಗ, ತನ್ನ ತಾಯಿಯ ಸಹಾಯದಿಂದ ಪರೀಕ್ಷೆಗೆ ಹಾಜರಾಗಿದ್ದ ಆ ಕ್ಷಣವೇ ಎಲ್ಲರ ಮನಸ್ಸನ್ನು ಮುಟ್ಟಿತ್ತು.

ಇದೀಗ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಸುಮಾ 625ಕ್ಕೆ 374 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾಳೆ. ಸಂಕಷ್ಟಗಳ ನಡುವೆಯೂ ಸಾಧನೆ ಮಾಡಿದ ಅವಳ ಈ ಯಶಸ್ಸು ರಾಜ್ಯದಾದ್ಯಂತ ಪ್ರೇರಣೆಯ ಕಥೆಯಾಗಿ ಹರಡುತ್ತಿದೆ.

ಸದ್ಯ ಕುಸುಮಾ ಬೆಂಗಳೂರಿನ ವೈಟ್‌ಫೀಲ್ಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವಳ ಧೈರ್ಯ, ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-23 17:09:56
No Reviews