ಭಾರತ–ಪಾಕ್ ಪಂದ್ಯ ಮತ್ತೆ ಸಂಕಷ್ಟದಲ್ಲಿ

ಕೊಲಂಬೊದಲ್ಲಿ ಈ ತಿಂಗಳು ಮಳೆಯ ವಾತಾವರಣ ತೀವ್ರವಾಗಿದ್ದು, ಈಗಾಗಲೇ ಹಲವು ಅಭ್ಯಾಸ ಪಂದ್ಯಗಳು ಮಳೆಯಿಂದ ರದ್ದಾಗಿವೆ. ಇದೇ ಕಾರಣದಿಂದ ಭಾರತ–ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಟಿ20 ವಿಶ್ವಕಪ್ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ. ಫೆಬ್ರವರಿ 14ರಂದು 65% ಮಳೆಯ ಸಾಧ್ಯತೆ ಇದ್ದು, 15ರಂದು ಭಾನುವಾರವೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ 50% ಎಂದು ಹವಾಮಾನ ಇಲಾಖೆ ಸೂಚಿಸಿದೆ. ಸಂಜೆ 6 ಗಂಟೆಯ ನಂತರ ಮಳೆ ಹೆಚ್ಚುವ ಸಾಧ್ಯತೆ ಇರುವುದರಿಂದ ಪಂದ್ಯ ವಿಳಂಬವಾಗುವ ಆತಂಕವಿದೆ. ಒಂದೊಮ್ಮೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ.

ಇತ್ತ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ಸಂಪೂರ್ಣ ಸಿದ್ಧವಾಗಿದೆ ಎಂದು ತಿಲಕ್ ವರ್ಮಾ ಹೇಳಿದ್ದಾರೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ ಈಗಾಗಲೇ ಹಲವು ಅಂತರರಾಷ್ಟ್ರೀಯ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಭಾರತ–ಪಾಕ್ ಮುಖಾಮುಖಿಗೆ ಸಜ್ಜಾಗಿದೆ. ಭದ್ರತಾ ಕಾರಣಗಳಿಂದ ಬಾಂಗ್ಲಾವನ್ನು ವಿಶ್ವಕಪ್‌ನಿಂದ ಹೊರಗಿಟ್ಟಿದ್ದ ಹಿನ್ನೆಲೆ ಪಾಕಿಸ್ತಾನ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಐಸಿಸಿ ಮಧ್ಯಸ್ಥಿಕೆಯಿಂದ ಪಾಕ್ ಸಮ್ಮತಿಸಿತ್ತು. ಈ ಪಂದ್ಯ ನಡೆಯದಿದ್ದರೆ ಸುಮಾರು ₹2200 ಕೋಟಿ ನಷ್ಟವಾಗುವ ಅಂದಾಜು ಇದ್ದು, ಸದ್ಯಕ್ಕೆ ಐಸಿಸಿ ಮತ್ತು ಕ್ರಿಕೆಟ್ ಲೋಕ ಆ ಭಾರೀ ನಷ್ಟದಿಂದ ತಪ್ಪಿಸಿಕೊಂಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-12 12:38:25
No Reviews