ಭಾರತದ ವಿರುದ್ಧ ಪಾಕ್‌ 3 ಷರತ್ತುಗಳು! ಫೆ.15 ಪಂದ್ಯ

ಭಾರತದ ವಿರುದ್ಧದ ಪಂದ್ಯ ಬಹಿಷ್ಕಾರದ ಬಳಿಕ ಐಸಿಸಿ ಪಿಸಿಬಿಗೆ ಎಚ್ಚರಿಕೆ ನೀಡಿದ್ದು, ಅದರ ಬೆನ್ನಲ್ಲೇ ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯವಾಡಲು ಒಪ್ಪಿಗೆಯ ಸೂಚನೆ ನೀಡಿದೆ. ಆದರೆ ಅದಕ್ಕೆ ಬದಲಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟು, ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಐಸಿಸಿ ಅಧಿಕಾರಿಗಳು ತುರ್ತಾಗಿ ಲಾಹೋರ್‌ಗೆ ಧಾವಿಸಿದರು. ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಸುಮಾರು ಐದು ಗಂಟೆಗಳ ಸುದೀರ್ಘ ಸಭೆಯಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹಾಗೂ ಐಸಿಸಿ ಉಪಾಧ್ಯಕ್ಷ ಅಮೀನುಲ್ ಇಸ್ಲಾಂ ಭಾಗವಹಿಸಿದ್ದರು.

ಪಾಕಿಸ್ತಾನದ ಪ್ರಮುಖ ಬೇಡಿಕೆಗಳಲ್ಲಿ ಐಸಿಸಿ ಆದಾಯದಲ್ಲಿ ಹೆಚ್ಚಿನ ಪಾಲು, ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳ ಪುನರಾರಂಭ ಹಾಗೂ ಟಿ20 ವಿಶ್ವಕಪ್ ವೇಳೆ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಬೇಕು ಎಂಬ ಷರತ್ತುಗಳು ಸೇರಿವೆ. ಇದೇ ವೇಳೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ ಐಸಿಸಿಯಿಂದ ಆಯೋಜನಾ ಹಕ್ಕುಗಳು ಹಾಗೂ ಹಣಕಾಸು ಪರಿಹಾರವನ್ನು ಕೇಳಿದೆ ಎನ್ನಲಾಗಿದೆ.

ಭಾರತ–ಪಾಕಿಸ್ತಾನ ಪಂದ್ಯ ಕ್ರಿಕೆಟ್ ಜಗತ್ತಿನ ಅತ್ಯಂತ ಹೈವೋಲ್ಟೇಜ್‌ ಮುಖಾಮುಖಿಯಾಗಿದ್ದು, ಪ್ರಸಾರ ಹಕ್ಕುಗಳು, ಜಾಹೀರಾತು ಹಾಗೂ ಪ್ರಾಯೋಜಕತ್ವದ ಬಹುಪಾಲು ಆದಾಯ ಈ ಒಂದೇ ಪಂದ್ಯದಿಂದ ಬರುತ್ತದೆ. ಪಂದ್ಯ ರದ್ದಾದರೆ ಐಸಿಸಿಗಷ್ಟೇ ಅಲ್ಲ, ಆತಿಥ್ಯ ವಹಿಸಿರುವ ಶ್ರೀಲಂಕಾದ ಆರ್ಥಿಕತೆಯ ಮೇಲೂ ದೊಡ್ಡ ಹೊಡೆತ ಬೀಳಲಿದೆ ಎಂಬುದು ಸ್ಪಷ್ಟ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-09 13:01:30
No Reviews