27 ಪಂದ್ಯಗಳೊಂದಿಗೆ ವಿಶ್ವಕಪ್ ಸಿದ್ಧತೆಗೆ ಟೀಮ್ ಇಂಡಿಯಾ ಸಜ್ಜು

ಟೀಮ್ ಇಂಡಿಯಾದ 2027ರ ಏಕದಿನ ವಿಶ್ವಕಪ್ (ODI World Cup 2027) ಸಿದ್ಧತೆ ಇಂದಿನಿಂದ (ಜೂನ್ 13) ಅಧಿಕೃತವಾಗಿ ಆರಂಭವಾಗಲಿದೆ. ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಸರಣಿಯೊಂದಿಗೆ ಅಭಿಯಾನಕ್ಕೆ ಚಾಲನೆ ದೊರೆಯುತ್ತಿದ್ದು, ಇದರ ನಂತರ ಭಾರತ ತಂಡ ಮುಂದಿನ ತಿಂಗಳುಗಳಲ್ಲಿ ಒಟ್ಟು 24 ಪಂದ್ಯಗಳನ್ನು ಆಡಲಿದೆ. ಒಟ್ಟಾರೆ ವಿಶ್ವಕಪ್‌ಗೆ ಮುನ್ನ ಟೀಮ್ ಇಂಡಿಯಾ 27 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

ಐಸಿಸಿ ಭವಿಷ್ಯದ ಪ್ರವಾಸ ಯೋಜನೆ (FTP) ಮತ್ತು BCCI ವೇಳಾಪಟ್ಟಿಯ ಪ್ರಕಾರ, ಈ 27 ಪಂದ್ಯಗಳು ವಿಭಿನ್ನ ದೇಶಗಳ ವಿರುದ್ಧ ಹಂಚಿಕೆಯಾಗಿವೆ. ಅಫ್ಘಾನಿಸ್ತಾನ್ ವಿರುದ್ಧ 3 ಪಂದ್ಯಗಳ ಸರಣಿಯಿಂದ ಆರಂಭವಾಗುವ ಈ ಸಿದ್ಧತೆ, ಹಂತಹಂತವಾಗಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಝಿಂಬಾಬ್ವೆ ವಿರುದ್ಧದ ಸರಣಿಗಳ ಮೂಲಕ ಮುಂದುವರಿಯಲಿದೆ. ಜೊತೆಗೆ 2027ರ ಮಧ್ಯಭಾಗದಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಯೂ ವಿಶ್ವಕಪ್ ಸಿದ್ಧತೆಯ ಪ್ರಮುಖ ಭಾಗವಾಗಲಿದೆ.

ಸರಣಿಗಳ ವಿವರ ಹೀಗಿದೆ: ಅಫ್ಘಾನಿಸ್ತಾನ್ ವಿರುದ್ಧ 3 ಪಂದ್ಯಗಳು (ಜೂನ್ 2026), ಇಂಗ್ಲೆಂಡ್ ಪ್ರವಾಸದಲ್ಲಿ 3 ಪಂದ್ಯಗಳು, ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ 3 ಪಂದ್ಯಗಳು, ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳು, ಶ್ರೀಲಂಕಾ ವಿರುದ್ಧ 3 ಪಂದ್ಯಗಳು, ಝಿಂಬಾಬ್ವೆ ವಿರುದ್ಧ 3 ಪಂದ್ಯಗಳು ಹಾಗೂ ಏಷ್ಯಾ ಕಪ್‌ನಲ್ಲಿ ಕನಿಷ್ಠ 7 ಪಂದ್ಯಗಳು (ಫೈನಲ್ ತಲುಪಿದರೆ).

ಈ ಎಲ್ಲ ಸರಣಿಗಳ ಮೂಲಕ ಭಾರತ ತಂಡ ಒಟ್ಟು 27 ಏಕದಿನ ಪಂದ್ಯಗಳನ್ನು ಆಡಿದ ಬಳಿಕ, 2027ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸುವ ವಿಶ್ವಕಪ್‌ಗೆ ಸಂಪೂರ್ಣ ಸಿದ್ಧತೆಯೊಂದಿಗೆ ಪ್ರವೇಶಿಸಲಿದೆ.

ಭಾರತ vs ಅಫ್ಘಾನಿಸ್ತಾನ್ ಏಕದಿನ ಸರಣಿ ವೇಳಾಪಟ್ಟಿ:

  • 1ನೇ ಪಂದ್ಯ: ಜೂನ್ 13 – ಧರ್ಮಶಾಲಾ

  • 2ನೇ ಪಂದ್ಯ: ಜೂನ್ 17 – ಲಕ್ನೋ

  • 3ನೇ ಪಂದ್ಯ: ಜೂನ್ 20 – ಚೆನ್ನೈ

ಭಾರತ ಏಕದಿನ ತಂಡದಲ್ಲಿ ಶುಭ್ಮನ್ ಗಿಲ್ (ನಾಯಕ), ಕೆಎಲ್ ರಾಹುಲ್, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ ಹಾಗೂ ಪ್ರಿನ್ಸ್ ಯಾದವ್ ಇದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-13 11:15:11
No Reviews