ಒಂದು ಟೀ, ಗಂಟೆಗಟ್ಟಲೆ ಮೀಟಿಂಗ್! ಬೆಂಗಳೂರಿನ ಹೋಟೆಲ್ಗಳಲ್ಲಿ ಟೇಬಲ್ ಚಾರ್ಜ್’ ಯೋಚನೆ

ಈ ಸಮಸ್ಯೆಗೆ ಪರಿಹಾರವಾಗಿ, ಹೋಟೆಲ್ಗಳಲ್ಲಿ ದೀರ್ಘಕಾಲ ಕೂತರೆ ‘ಟೇಬಲ್ ಚಾರ್ಜ್’ ಅಥವಾ ದಂಡ ವಿಧಿಸುವ ಕುರಿತು ಹೋಟೆಲ್ ಮಾಲೀಕರ ಸಂಘ ಹೊಸ ಚಿಂತನೆ ನಡೆಸುತ್ತಿದೆ.

ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಣ್ಣ ಮತ್ತು ಮಧ್ಯಮ ಹೋಟೆಲ್ಗಳಲ್ಲಿ, ತಿಂಡಿ ಅಥವಾ ಟೀ ಸೇವನೆಗಾಗಿ ಬಂದ ಹಲವರು ಒಂದೇ ಕಾಫಿ ಅಥವಾ ಟೀ ಕುಡಿದು ತಾಸುಗಟ್ಟಲೆ ಕುಳಿತು ಸಭೆಗಳು, ಭೂ ವ್ಯವಹಾರ, ಮದುವೆ ಮಾತುಕತೆಗಳು ಹಾಗೂ ಖಾಸಗಿ ಚರ್ಚೆಗಳನ್ನು ನಡೆಸುತ್ತಿರುವುದು ಮಾಲೀಕರಿಗೆ ದೊಡ್ಡ ತಲೆನೋವಾಗುತ್ತಿದೆ. ಇದರಿಂದ ನಿಜವಾದ ಗ್ರಾಹಕರಿಗೆ ಆಸನ ಸಿಗದೆ, ವ್ಯಾಪಾರಕ್ಕೂ ನೇರ ಹೊಡೆತ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪಾರ್ಕಿಂಗ್ ಚಾರ್ಜ್‌ನಂತೆಯೇ ಟೇಬಲ್ ಬಳಕೆಗೆ ಕೂಡ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ನಿರ್ದಿಷ್ಟ ಅವಧಿವರೆಗೆ ಮಾತ್ರ ಉಚಿತವಾಗಿ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಆ ಸಮಯ ಮೀರಿದರೆ ದಂಡ ಅಥವಾ ಟೇಬಲ್ ಚಾರ್ಜ್ ವಿಧಿಸುವ ನಿರ್ಧಾರಕ್ಕೆ ಬರಲಾಗುತ್ತಿದೆ.

ಈ ಕುರಿತು ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು,
“ಒಂದು ಟೀ ಕುಡಿದು ಗಂಟೆಗಟ್ಟಲೆ ಕುಳಿತು ಸಭೆ ನಡೆಸುವುದರಿಂದ ಇತರ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಜೊತೆಗೆ ನಮ್ಮ ವ್ಯಾಪಾರಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ದೀರ್ಘಕಾಲ ಕೂತ ಗ್ರಾಹಕರಿಗೆ ಟೇಬಲ್ ಚಾರ್ಜ್ ವಿಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ 500 ರಿಂದ 1,000 ರೂ.ವರೆಗೆ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆದಿದೆ” ಎಂದು ತಿಳಿಸಿದ್ದಾರೆ.

ಇದಲ್ಲದೆ, ಈ ನಿರ್ಧಾರವನ್ನು ಅಧಿಕೃತವಾಗಿ ಜಾರಿಗೆ ತರಲು ಸರ್ಕಾರಕ್ಕೆ ಶೀಘ್ರದಲ್ಲೇ ಪತ್ರ ಬರೆದು ಅನುಮತಿ ಪಡೆಯಲು ಹೋಟೆಲ್ ಮಾಲೀಕರ ಸಂಘ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ಒಪ್ಪಿಗೆ ದೊರೆತರೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳಲ್ಲೂ ಈ ನಿಯಮ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ.

ಈ ಹೊಸ ಚಿಂತನೆ ಜಾರಿಯಾದರೆ, ಹೋಟೆಲ್ಗಳಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಈ ವಿಷಯ ಈಗಾಗಲೇ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-10 16:13:41
No Reviews