ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ; ದೇಶದ ನೇಕಾರರಿಗೆ ಮೋದಿ ಕರೆ

ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಕರೆ ನೀಡಿದ್ದಾರೆ. ನೇಕಾರರನ್ನು ಬೆಂಬಲಿಸಲು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಹಾಗೂ ಅವುಗಳನ್ನು ಬಳಸುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ, ಕೈಮಗ್ಗ ಉತ್ಪನ್ನಗಳ ಬಳಕೆಯನ್ನು ಜನಾಂದೋಲನವಾಗಿಸೋಣ. ನಿಮ್ಮ ನೆಚ್ಚಿನ ಕೈಮಗ್ಗ ಉಡುಪುಗಳು ಮತ್ತು ಉತ್ಪನ್ನಗಳೊಂದಿಗೆ ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ಇದರಿಂದ ಭಾರತದ ಶ್ರೀಮಂತ ಕೈಮಗ್ಗ ಪರಂಪರೆಗೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಗುರುತಿನ ಜೊತೆಗೆ ದೇಶದ ನೇಕಾರರು ಹಾಗೂ ಸಣ್ಣ ವ್ಯಾಪಾರಿಗಳಿಗೆ ನೇರ ಬೆಂಬಲ ದೊರೆಯಲಿದೆ ಎಂದು ಹೇಳಿದರು.

ಆಗಸ್ಟ್ 7ರಂದು ದೇಶಾದ್ಯಂತ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಭಾರತದ ವೈವಿಧ್ಯಮಯ ಕೈಮಗ್ಗ ಸಂಸ್ಕೃತಿಯನ್ನು ವಿಶ್ವದ ಮುಂದೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಭಾಗವಹಿಸಿ ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಪ್ರಧಾನಿ ಕರೆ ನೀಡಿದರು.

1905ರ ಆಗಸ್ಟ್ 7ರಂದು ಬ್ರಿಟಿಷರ ವಿರುದ್ಧ ಸ್ವದೇಶಿ ಚಳುವಳಿ ಆರಂಭವಾದ ಐತಿಹಾಸಿಕ ದಿನವನ್ನು ಸ್ಮರಿಸಿದ ಪ್ರಧಾನಿ, ಸ್ವದೇಶಿ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಮತ್ತೊಮ್ಮೆ ಮಾಡೋಣ ಎಂದರು.

ಕೈಮಗ್ಗ ಉತ್ಪನ್ನಗಳ ಬಳಕೆ ಹೆಚ್ಚಿದರೆ ಲಕ್ಷಾಂತರ ನೇಕಾರರ ಬದುಕಿಗೆ ಹೊಸ ಆಶಾಕಿರಣ ಮೂಡುತ್ತದೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ದೇಶದ ಆರ್ಥಿಕತೆಗೆ ಬಲ ಸಿಗುವುದರ ಜೊತೆಗೆ ಆತ್ಮನಿರ್ಭರ ಭಾರತದ ಕನಸಿಗೂ ವೇಗ ಸಿಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-07 11:21:51
No Reviews