ಗಿಲ್ಲಿ ನಟನ ವಿರುದ್ಧ ಟ್ಯಾಟೂ ಅಭಿಮಾನಿಯ ವಾಗ್ದಾಳಿ!

ಗಿಲ್ಲಿಯ ಭಾವಚಿತ್ರವನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಅಭಿಮಾನಿಯೊಬ್ಬರು, ನಟ ಅಭಿಮಾನಿಗಳಿಗೆ ಗೌರವ ನೀಡುತ್ತಿಲ್ಲ ಹಾಗೂ ನೀಡಿದ ಭರವಸೆಗಳನ್ನು ಉಳಿಸಿಕೊಂಡಿಲ್ಲ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಅವರ ಹಾಸ್ಯಪ್ರಜ್ಞೆ, ಸಮಯೋಚಿತ ಪ್ರತಿಕ್ರಿಯೆಗಳು ಮತ್ತು ಆಟದ ಶೈಲಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಕಾರ್ಯಕ್ರಮದ ಅವಧಿಯಲ್ಲಿ ಮಾತ್ರವಲ್ಲದೆ, ಕಾರ್ಯಕ್ರಮ ಮುಗಿದ ಬಳಿಕವೂ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಬಿಗ್ ಬಾಸ್ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಫ್ಯಾನ್‌ಬೇಸ್ ಪಡೆದ ಸ್ಪರ್ಧಿಗಳಲ್ಲಿ ಗಿಲ್ಲಿ ಮೊದಲಿಗರಾಗಿದ್ದಾರೆ ಎನ್ನಬಹುದು.

ಆದರೆ, ಈಗ ಅದೇ ಅಭಿಮಾನಿ ಬಳಗದಿಂದಲೇ ಅಸಮಾಧಾನದ ಧ್ವನಿ ಕೇಳಿಬರುತ್ತಿದೆ. ‘ಬಾಸ್ ಟಿವಿ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ಯಾಟೂ ಅಭಿಮಾನಿ,
“ಗಿಲ್ಲಿಯಲ್ಲಿ ಟ್ಯಾಲೆಂಟ್ ಇತ್ತು. ಅದನ್ನು ಹೊರಗೆ ತಂದು ನಿಲ್ಲಿಸಿದವರು ನಾವೇ ಅಭಿಮಾನಿಗಳು. ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ನನ್ನನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಷ್ಟು ದಿನವಾದರೂ ಆ ಭರವಸೆ ಈಡೇರಿಲ್ಲ. ಅಭಿಮಾನಿಗಳನ್ನು ಅವರು ಗೌರವಿಸುತ್ತಿಲ್ಲ” ಎಂದು ಆರೋಪಿಸಿದ್ದಾರೆ.

ಸದ್ಯ ಗಿಲ್ಲಿ ನಟ ಅವರು ಇನ್ಸ್ಟಾಗ್ರಾಮ್‌ನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದು, ಬಿಗ್ ಬಾಸ್ ಸ್ಪರ್ಧಿಯೊಬ್ಬರಿಗೆ ದೊರೆತ ಅಪರೂಪದ ಸಾಧನೆ ಇದಾಗಿದೆ. ಆದರೆ, ಈ ಅಪಾರ ಜನಪ್ರಿಯತೆಯೇ ಈಗ ಅವರಿಗೆ ತೊಂದರೆಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಕೆಲ ನಿಜವಾದ ಅಭಿಮಾನಿಗಳೇ “ನಿನ್ನನ್ನು ಗಿಲ್ಲಿ ಭೇಟಿ ಮಾಡಲೇಬೇಕೆಂಬ ಅವಶ್ಯಕತೆ ಇಲ್ಲ” ಎಂದು ಪ್ರತಿಕ್ರಿಯಿಸುತ್ತಿರುವುದು ಗಮನ ಸೆಳೆಯುತ್ತಿದೆ.

ಇದರ ನಡುವೆ, ಗಿಲ್ಲಿ ನಟ ಅವರು ಮುಂದಿನ ದಿನಗಳಲ್ಲಿ ನಿರ್ದೇಶನದ ಕಡೆ ಗಮನ ಹರಿಸುವ ಆಲೋಚನೆಯಲ್ಲಿ ಇದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಆದರೆ ಅಭಿಮಾನಿಗಳೊಂದಿಗೆ ಉಂಟಾದ ಈ ವಿವಾದ ಅವರ ಮುಂದಿನ ಪ್ರಯಾಣಕ್ಕೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-02 10:13:09
No Reviews