ಫುಟ್‌ಬಾಲ್ ಫೈನಲ್ ವೀಕ್ಷಿಸಿದ ಯುವಕರಿಗೆ ಡಿಕೆಶಿ ಭರ್ಜರಿ ಗಿಫ್ಟ್!

ಫಿಫಾ ಫೈನಲ್ ವೀಕ್ಷಿಸಿದ ಡಿಕೆಶಿ; ಯುವ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರದ ಮಹತ್ವದ ಯೋಜನೆ

ಬೆಂಗಳೂರು, ಜು. 20: 2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದ ಸಂಭ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಯುವಕರೊಂದಿಗೆ ಹಂಚಿಕೊಂಡರು. ಬೆಂಗಳೂರಿನಲ್ಲಿ ನಡೆದ ವಿಶೇಷ ವೀಕ್ಷಣಾ ಕಾರ್ಯಕ್ರಮದಲ್ಲಿ ಯುವ ಫುಟ್‌ಬಾಲ್‌ ಅಭಿಮಾನಿಗಳೊಂದಿಗೆ ಪಂದ್ಯ ವೀಕ್ಷಿಸಿದ ಅವರು, ಈ ಕ್ಷಣಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯದ ಯುವ ಜನಾಂಗವನ್ನು ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಅಸೋಸಿಯೇಷನ್‌ (KSFA) ಹಾಗೂ ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ಅವರು ಯುವಕರಿಗಾಗಿ ಫುಟ್‌ಬಾಲ್‌ ಫೈನಲ್‌ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಯುವಕರು ಹಾಗೂ ಫುಟ್‌ಬಾಲ್‌ ಅಭಿಮಾನಿಗಳು ಭಾಗವಹಿಸಿ ಪಂದ್ಯವನ್ನು ವೀಕ್ಷಿಸಿದರು.

ಯುವಕರ ಶಿಸ್ತು ಮತ್ತು ಕ್ರೀಡಾ ಮನೋಭಾವವನ್ನು ಶ್ಲಾಘಿಸಿದ ಡಿಕೆಶಿ, “ನಮ್ಮ ಯುವಕರು ಉತ್ತಮ ಶಿಸ್ತನ್ನು ಹೊಂದಿದ್ದಾರೆ. ಕ್ರೀಡಾ ಸ್ಫೂರ್ತಿಯಿಂದ ನಡೆದುಕೊಳ್ಳುವ ಅವರು ಕಾನೂನನ್ನು ಗೌರವಿಸುತ್ತಾರೆ ಎಂಬ ವಿಶ್ವಾಸವಿದೆ. ಫುಟ್‌ಬಾಲ್‌ ಇಡೀ ಜಗತ್ತನ್ನು ಯಾವುದೇ ಭೇದಭಾವವಿಲ್ಲದೆ ಒಗ್ಗೂಡಿಸುವ ಕ್ರೀಡೆಯಾಗಿದೆ” ಎಂದು ಹೇಳಿದರು.

ಗ್ರಾಮೀಣ ಪ್ರತಿಭೆಗಳಿಗೆ ಹೊಸ ವೇದಿಕೆ

ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರೀಡಾಪಟುಗಳಿಗೆ ನಿರಂತರ ಬೆಂಬಲ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಜೋಡೋ ಯುವಕರ ಸಂಘ’ ಸ್ಥಾಪಿಸಲಾಗುತ್ತಿದೆ. ಇದರ ಮೂಲಕ ರಾಜ್ಯದಾದ್ಯಂತ ಸುಮಾರು 10 ಸಾವಿರ ಯುವಕರನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಗುರಿ ಹೊಂದಲಾಗಿದೆ.

ಯುವಕರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದು, ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಅವರು ಹೇಳಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-07-20 11:37:05
No Reviews