ಫಿಫಾ ವಿಶ್ವಕಪ್: ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯಗಳ ವೇಳಾಪಟ್ಟಿ ರಿಲೀಸ್

ನ್ಯೂಜೆರ್ಸಿ, ಜು.4: 2026ರ ಫಿಫಾ ವಿಶ್ವಕಪ್‌ನ ಎರಡನೇ ನಾಕೌಟ್ ಸುತ್ತು ಶನಿವಾರದಿಂದ ಆರಂಭವಾಗಲಿದ್ದು, ಅಂತಿಮ 16 ತಂಡಗಳು ಕಣದಲ್ಲಿವೆ. ಮುಂದಿನ ನಾಲ್ಕು ದಿನಗಳಲ್ಲಿ ನಡೆಯಲಿರುವ ಎಂಟು ಭರ್ಜರಿ ಪಂದ್ಯಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವ ತಂಡಗಳನ್ನು ನಿರ್ಧರಿಸಲಿವೆ. ಈ ಹಂತಕ್ಕೆ ಮೂರು ಆತಿಥೇಯ ರಾಷ್ಟ್ರಗಳು ಸಹ ಯಶಸ್ವಿಯಾಗಿ ಪ್ರವೇಶಿಸಿರುವುದು ವಿಶೇಷ.

ಭಾರತದ ಅಭಿಮಾನಿಗಳು ಪಂದ್ಯಗಳನ್ನು ಯುನೈಟೆಡ್ 8 ಸ್ಪೋರ್ಟ್ಸ್ 1 ಮತ್ತು 2 (SD ಹಾಗೂ HD) ಚಾನೆಲ್‌ಗಳಲ್ಲಿ ನೇರವಾಗಿ ವೀಕ್ಷಿಸಬಹುದು. ಜೊತೆಗೆ ZEE5 ಪ್ಲಾಟ್‌ಫಾರ್ಮ್‌ನಲ್ಲಿ ಚಂದಾದಾರಿಕೆಯಿಂದ ಆನ್‌ಲೈನ್‌ನಲ್ಲಿ ಪಂದ್ಯ ವೀಕ್ಷಣೆ ಸಾಧ್ಯ.

16ರ ಸುತ್ತಿನ ಪೂರ್ಣ ವೇಳಾಪಟ್ಟಿ

  • ಕೆನಡಾ vs ಮೊರಾಕೊ – ಜು.4, ರಾತ್ರಿ 10:30

  • ಪರಾಗ್ವೆ vs ಫ್ರಾನ್ಸ್ – ಜು.5, ಬೆಳಿಗ್ಗೆ 2:30

  • ಬ್ರೆಜಿಲ್ vs ನಾರ್ವೆ – ಜು.6, ಬೆಳಿಗ್ಗೆ 1:30

  • ಮೆಕ್ಸಿಕೊ vs ಇಂಗ್ಲೆಂಡ್ – ಜು.6, ಬೆಳಿಗ್ಗೆ 5:30

  • ಪೋರ್ಚುಗಲ್ vs ಸ್ಪೇನ್ – ಜು.7, ರಾತ್ರಿ 12:30

  • ಯುಎಸ್ಎ vs ಬೆಲ್ಜಿಯಂ – ಜು.7, ಬೆಳಿಗ್ಗೆ 5:30

  • ಅರ್ಜೆಂಟೀನಾ vs ಈಜಿಪ್ಟ್ – ಜು.7, ರಾತ್ರಿ 9:30

  • ಸ್ವಿಟ್ಜರ್ಲೆಂಡ್ vs ಕೊಲಂಬಿಯಾ – ಜು.8, ಬೆಳಿಗ್ಗೆ 1:30


ಸೋಲಿನ ಅಂಚಿನಿಂದ ಪಾರಾದ ಅರ್ಜೆಂಟೀನಾ

ಶುಕ್ರವಾರ ತಡರಾತ್ರಿ ನಡೆದ 32ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಕೂದಲೆಳೆ ಅಂತರದಲ್ಲಿ ದೊಡ್ಡ ಆಘಾತದಿಂದ ಪಾರಾಯಿತು. ಕೇಪ್ ವರ್ಡೆ ವಿರುದ್ಧ 3–2 ರೋಚಕ ಜಯ ಸಾಧಿಸಿ ತಂಡವು ಪ್ರಿ-ಕ್ವಾರ್ಟರ್‌ಫೈನಲ್ (ಅಂತಿಮ 16) ಹಂತಕ್ಕೆ ಪ್ರವೇಶಿಸಿದೆ.

ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ 29ನೇ ನಿಮಿಷದಲ್ಲಿ ಗೋಲು ಹೊಡೆದು ಮುನ್ನಡೆ ನೀಡಿದರು. ಆದರೆ 59ನೇ ನಿಮಿಷದಲ್ಲಿ ಡೆರಾಯ್ ಡುವಾರ್ಟೆ ಗೋಲು ದಾಖಲಿಸಿ ಕೇಪ್ ವರ್ಡೆಗೆ ಸಮಬಲ ತಂದರು. ಹೆಚ್ಚುವರಿ ಸಮಯದಲ್ಲಿ ಎರಡೂ ತಂಡಗಳು ತೀವ್ರ ಪೈಪೋಟಿ ನೀಡಿದವು.

ಲಿಸಾಂಡ್ರೊ ಮಾರ್ಟಿನೆಜ್ 2–1 ಮುನ್ನಡೆ ತಂದರೂ, 103ನೇ ನಿಮಿಷದಲ್ಲಿ ಸಿಡ್ನಿ ಲೋಪ್ಸ್ ಕ್ಯಾಬ್ರಾಲ್ ದೂರದ ಅದ್ಭುತ ಶಾಟ್ ಮೂಲಕ ಪಂದ್ಯವನ್ನು ಮತ್ತೆ 2–2ಕ್ಕೆ ತಂದುಕೊಂಡರು. ಪಂದ್ಯ ಡ್ರಾ ಆಗುವ ಆತಂಕದ ನಡುವೆ 111ನೇ ನಿಮಿಷದಲ್ಲಿ ಕೇಪ್ ವರ್ಡೆ ಆಟಗಾರ ಡೈನಿ ಬೋರ್ಗೆಸ್ ಅವರ ಆತ್ಮಘಾತಿ ಗೋಲು ಅರ್ಜೆಂಟೀನಾಗೆ ಜಯವನ್ನು ಖಚಿತಪಡಿಸಿತು.

ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯ ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಮೂಡಿಸಿತು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-07-04 12:46:14
No Reviews