ಚಳಿಯಲ್ಲಿ ಮೊಸರು ಆರೋಗ್ಯಕ್ಕೆ ಒಳ್ಳೆಯದಾ?

ಈ ಪ್ರಶ್ನೆ ಹಿಂದಿನಿಂದಲೂ ಜನರ ಮನಸ್ಸನ್ನು ಕಾಡುತ್ತಲೇ ಬಂದಿದೆ. ಚಳಿಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು, ಕಫದಂತಹ ಸಮಸ್ಯೆಗಳು ಹೆಚ್ಚುತ್ತವೆ ಎಂಬುದು ಕೆಲವರ ವಾದವೂ, ಇನ್ನೂ ಕೆಲವರ ಅನುಭವವೂ ಆಗಿದೆ. ಆಯುರ್ವೇದದಲ್ಲಿಯೂ ಚಳಿಗಾಲದಲ್ಲಿ, ವಿಶೇಷವಾಗಿ ರಾತ್ರಿ ಹೊತ್ತು ಮೊಸರು ಸೇವನೆಯನ್ನು ತಡೆಯುವ ಸಲಹೆ ನೀಡಲಾಗಿದೆ. ಹಾಗಾದರೆ ಚಳಿಗಾಲದಲ್ಲಿ ಮೊಸರು ತಿನ್ನಬೇಕೆ ಅಥವಾ ಬೇಡವೇ? ತಿಂದರೆ ಏನಾಗುತ್ತದೆ? ತಿನ್ನದಿದ್ದರೆ ಏನಾದರೂ ನಷ್ಟವಿದೆಯೇ?

ಚಳಿಗಾಲದಲ್ಲಿ ಶೀತ–ಕೆಮ್ಮು–ಕಫದ ಸಮಸ್ಯೆಗಳು ನಿಮಗೆ ಇಲ್ಲದಿದ್ದರೆ, ಯಾವುದೇ ಋತುವಿನಲ್ಲೂ ಮೊಸರು ಅಥವಾ ಮಜ್ಜಿಗೆ ಸೇವಿಸುವುದರಲ್ಲಿ ಅಡ್ಡಿಯಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಪ್ರೊಬಯಾಟಿಕ್ ಅಂಶಗಳು ಸಮೃದ್ಧವಾಗಿರುವ ಮೊಸರು–ಮಜ್ಜಿಗೆ ದೇಹಕ್ಕೆ ಅಗತ್ಯವಾದ ಸ್ನೇಹಿ ಬ್ಯಾಕ್ಟೀರಿಯಾಗಳನ್ನು ಒದಗಿಸುತ್ತವೆ. ಜೊತೆಗೆ ಕ್ಯಾಲ್ಶಿಯಂ, ಫಾಸ್ಫರಸ್, ಪೊಟಾಶಿಯಂ, ವಿಟಮಿನ್ ಬಿ12 ಮುಂತಾದ ಮಹತ್ವದ ಪೋಷಕಾಂಶಗಳೂ ಇದರಲ್ಲಿ ಹೇರಳವಾಗಿವೆ. ನಮ್ಮ ದೇಹಕ್ಕೆ ಸೂಕ್ತವಾಗುವ ರೀತಿಯಲ್ಲಿ ಮೊಸರನ್ನು ಬೇರೆಬೇರೆ ರೂಪಗಳಲ್ಲಿ ಸೇವಿಸುವ ಅವಕಾಶವೂ ಇದೆ.

ಲಾಭಗಳೇನು?
ಮೊಸರು ಎಂದಾಕ್ಷಣ ಅದನ್ನು ತಣ್ಣಗೇ ತಿನ್ನಬೇಕೆಂಬ ನಿಯಮವಿಲ್ಲ. ಕೆಲವರು ಬೆಚ್ಚಗೆ ಮಾಡಿ ಅಥವಾ ಬಿಸಿ ಅಡುಗೆಗಳ ಜೊತೆಗೆ ಮೊಸರು ಬಳಸುತ್ತಾರೆ. ಮೊಸರಿನ ಪ್ರಮುಖ ಲಾಭವೆಂದರೆ ಜೀರ್ಣಾಂಗಗಳ ಆರೋಗ್ಯವನ್ನು ಕಾಪಾಡುವ ಪ್ರೊಬಯಾಟಿಕ್ ಕಿಣ್ವಗಳು ಇದರಲ್ಲಿ ಹೆಚ್ಚಾಗಿ ಇರುವುದಾಗಿದೆ. ಇದರಿಂದ ಚಳಿಗಾಲದಲ್ಲೂ ಆಸಿಡಿಟಿ, ಹೊಟ್ಟೆಯುರಿ, ಹುಳಿತೇಗು, ಅಜೀರ್ಣದಂತಹ ಸಮಸ್ಯೆಗಳಿಂದ ದೂರವಾಗಲು ಸಾಧ್ಯ.

ಪೋಷಕಸತ್ವಗಳ ಖಜಾನೆ
ಕ್ಯಾಲ್ಶಿಯಂ, ವಿಟಮಿನ್ ಬಿ12, ಪ್ರೋಟೀನ್ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳನ್ನು ಮೊಸರು ಹೊಂದಿದೆ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ, ಸ್ನಾಯುಗಳು ಬಲವಾಗುತ್ತವೆ, ಜೀರ್ಣಕ್ರಿಯೆಯ ಕ್ಷಮತೆ ಹೆಚ್ಚುತ್ತದೆ ಮತ್ತು ದೇಹದ ಒಟ್ಟಾರೆ ಸ್ವಾಸ್ಥ್ಯ ಉತ್ತಮಗೊಳ್ಳುತ್ತದೆ. ಚಳಿಗಾಲದಲ್ಲಿ ಸೋಂಕುಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲೂ ಮೊಸರು ಸಹಕಾರಿ.

ದೇಹದ ಉಷ್ಣತೆಗೆ ಸಹಾಯ
ಮೊಸರನ್ನು ಫ್ರಿಜ್‌ನಲ್ಲಿಟ್ಟು ತಣ್ಣಗೆ ಮಾಡಿಯೇ ತಿನ್ನಬೇಕೆಂಬುದು ತಪ್ಪು ಕಲ್ಪನೆ. ಚಳಿಗಾಲದಲ್ಲಿ ಮೊಸರು ಅಷ್ಟೇನು ಬೇಗ ಹುಳಿಯಾಗುವುದಿಲ್ಲ. ವಾತಾವರಣದ ಉಷ್ಣತೆಯಲ್ಲೇ ಅದನ್ನು ಬಳಸಬಹುದು. ಪಾರಂಪರಿಕ ಆರೋಗ್ಯಪದ್ಧತಿಗಳ ಪ್ರಕಾರ ಮೊಸರು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಸಹ ಇದು ನೆರವಾಗಬಹುದು.

ಬಹುಬಗೆಯ ಬಳಕೆ
ಮೊಸರು ಭಾರತೀಯ ಅಡುಗೆಮನೆಗಳಲ್ಲಿ ಮಾತ್ರವಲ್ಲ, ಜಗತ್ತಿನ ವಿವಿಧ ಪಾಕಪದ್ದತಿಗಳಲ್ಲಿಯೂ ಬಳಕೆಯಲ್ಲಿದೆ. ಡಿಪ್‌, ಸ್ಪ್ರೆಡ್‌, ಟಾಪಿಂಗ್‌ಗಳಾಗಿ ಬಳಸುವುದರಿಂದ ಹಿಡಿದು ಮಜ್ಜಿಗೆ, ರಾಯ್ತಾ, ಮೊಸರು ಅಡುಗೆಗಳವರೆಗೆ ಇದರ ಉಪಯೋಗ ವ್ಯಾಪಕ. ನಮ್ಮ ದೇಶದಲ್ಲಿ ಯಾವ ರಾಜ್ಯವನ್ನೇ ತೆಗೆದುಕೊಂಡರೂ ಒಂದಿಲ್ಲೊಂದು ರೂಪದಲ್ಲಿ ಮೊಸರು ಬಳಕೆಯ ಅಡುಗೆಗಳು ಕಂಡುಬರುತ್ತವೆ.

ತೂಕ ಇಳಿಕೆಗೆ ಸಹಕಾರಿ
ಮೊಸರು ತಿಂದರೆ ದಪ್ಪ ಆಗುತ್ತೇವೆ ಎಂಬ ಭ್ರಮೆ ಹಲವರಲ್ಲಿದೆ. ಆದರೆ ಮಿತವಾಗಿ ಮೊಸರು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುವ ಮೂಲಕ ಕಳ್ಳ ಹಸಿವನ್ನು ನಿಯಂತ್ರಿಸುತ್ತದೆ. ತೂಕದ ಬಗ್ಗೆ ಆತಂಕವಿದ್ದರೆ ಲೋ-ಫ್ಯಾಟ್ ಮೊಸರು ಅಥವಾ ಕಡೆದು ಬೆಣ್ಣೆ ತೆಗೆದ ಮಜ್ಜಿಗೆಯನ್ನು ಧಾರಾಳವಾಗಿ ಬಳಸಬಹುದು.

ಮೊಸರು ಸೇವಿಸಿದ ಬಳಿಕ ಹೊಟ್ಟೆ ತೊಂದರೆ ಆಗುತ್ತಿದೆ ಎಂದು ಅನಿಸಿದರೆ, ಮೊಸರಿನ ಅಲರ್ಜಿಯಿದೆಯೇ ಎಂಬುದನ್ನು ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಕೆಲವರಿಗೆ ಚಳಿಗಾಲದಲ್ಲಿ ಕೆಮ್ಮು–ಕಫ ಹೆಚ್ಚುವ ಸಮಸ್ಯೆ ಕಾಣಿಸಬಹುದು; ಅಂಥ ಸಂದರ್ಭಗಳಲ್ಲಿ ರಾತ್ರಿ ಮೊಸರು ಸೇವನೆ ತಪ್ಪಿಸುವುದು ಉತ್ತಮ. ಅಸ್ತಮಾ ಇರುವವರು ಕೂಡ ಎಚ್ಚರಿಕೆ ವಹಿಸಬೇಕು. ಬಿಸಿ ಅಡುಗೆಗಳಲ್ಲಿ ಮೊಸರು ಬಳಸಿದರೆ ತೊಂದರೆ ಆಗುವುದಿಲ್ಲವೇ ಎಂಬುದನ್ನು ಪರಿಶೀಲಿಸಬಹುದು.

ಒಟ್ಟಾರೆ, ಸೂಕ್ತ ಪ್ರಮಾಣ ಮತ್ತು ಸರಿಯಾದ ಸಮಯದಲ್ಲಿ ಮೊಸರು–ಮಜ್ಜಿಗೆ ಸೇವಿಸಿದರೆ, ಚಳಿಗಾಲದಲ್ಲಿಯೂ ಅದು ಆರೋಗ್ಯಕ್ಕೆ ಲಾಭಕರವೇ ಹೊರತು ಹಾನಿಕಾರಕವಲ್ಲ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 10:06:35
No Reviews