ಇಂಧನ ದರ ಏರಿಕೆ ಪರಿಣಾಮ: ಖಾಸಗಿ ಬಸ್ ದರದಲ್ಲಿ ಭಾರಿ ಏರಿಕೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 3 ರೂ. ಏರಿಕೆಯಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಖಾಸಗಿ ಬಸ್ ಟಿಕೆಟ್ ದರಗಳು ದಿಢೀರ್ ಹೆಚ್ಚಳಗೊಂಡಿವೆ. ಹೊಸ ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.

ಪೆಟ್ರೋಲ್-ಡೀಸೆಲ್ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತಿರುವ ಹಿನ್ನೆಲೆ, ಬಸ್ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ದೂರದ ಊರುಗಳಿಗೆ ಪ್ರಯಾಣಿಸುವ ಸಾವಿರಾರು ಮಂದಿ ಖಾಸಗಿ ಬಸ್‌ಗಳನ್ನೇ ಅವಲಂಬಿಸುತ್ತಿದ್ದು, ಈ ದರ ಏರಿಕೆಯಿಂದ ಅವರ ಖರ್ಚು ಮತ್ತಷ್ಟು ಹೆಚ್ಚಲಿದೆ.

ಖಾಸಗಿ ಬಸ್ ಮಾಲೀಕರು ಡೀಸೆಲ್ ಬೆಲೆ ಏರಿಕೆಯನ್ನು ಕಾರಣವಾಗಿ ಉಲ್ಲೇಖಿಸಿ ಸಭೆ ನಡೆಸಿದ್ದು, ಟಿಕೆಟ್ ದರವನ್ನು ಶೇ.20 ರಿಂದ 30ರಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಇದರಿಂದ ಪ್ರಮುಖ ಮಾರ್ಗಗಳಲ್ಲೂ ದರ ಏರಿಕೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ಪರಿಷ್ಕೃತ Non-AC Sleeper ದರಗಳು (ಬೆಂಗಳೂರು ಮೂಲವಾಗಿ):
ಬೆಂಗಳೂರು–ಬೆಳಗಾವಿ: ₹1000 ರಿಂದ ₹1200
ಬೆಂಗಳೂರು–ಮಂಗಳೂರು: ₹900 ರಿಂದ ₹1150
ಬೆಂಗಳೂರು–ಮಡಿಕೇರಿ: ₹700 ರಿಂದ ₹900
ಬೆಂಗಳೂರು–ಹುಬ್ಬಳ್ಳಿ: ₹900 ರಿಂದ ₹1050
ಬೆಂಗಳೂರು–ಕಲಬುರ್ಗಿ: ₹1200 ರಿಂದ ₹1400
ಬೆಂಗಳೂರು–ಬಳ್ಳಾರಿ: ₹800 ರಿಂದ ₹950

ಡೀಸೆಲ್ ಬೆಲೆ ಏರಿಕೆಯಿಂದ ಬಸ್ ನಿರ್ವಹಣೆ ಕಷ್ಟಕರವಾಗಿದೆ ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದು, ಸರ್ಕಾರ ರಸ್ತೆ ತೆರಿಗೆಯನ್ನು ಕಡಿತಗೊಳಿಸಿದರೆ ದರ ಇಳಿಕೆಗೆ ಸಿದ್ಧರಿದ್ದೇವೆ ಎಂದು ಸಂಘದ ಅಧ್ಯಕ್ಷ ನಟರಾಜ್ ಶರ್ಮ ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-15 17:22:52
No Reviews