ಬಿಗ್‌ಬಾಸ್‌ನಲ್ಲಿ ಮತ್ತೆ ಒಂದಾದ ಸ್ಪರ್ಧಿಗಳು; ಅಶ್ವಿನಿ ಮಸ್ತ್ ಡ್ಯಾನ್ಸ್‌, ಗಿಲ್ಲಿಯ ಭರ್ಜರಿ ಕಾಮಿಡಿ!

‘ದೊಡ್ಮನೆ ಹಬ್ಬ’ ಹೆಸರಿನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಭರ್ಜರಿ ರಿಯೂನಿಯನ್ ನಡೆದಿದೆ. ಗಿಲ್ಲಿ, ರಕ್ಷಿತಾ, ಕಾವ್ಯಾ, ಅಶ್ವಿನಿ ಗೌಡ ಹಾಗೂ ರಘು ಸೇರಿದಂತೆ ಎಲ್ಲರೂ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿ ಸಂಭ್ರಮಿಸಿದ್ದಾರೆ. ಗಿಲ್ಲಿ ತಮ್ಮ ಖಾಸಾ ಕಾಮಿಡಿ ಪಂಚ್‌ಗಳಿಂದ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ತುಂಬಿದರು.

ಈ ವಿಶೇಷ ಶೋ ಫೆಬ್ರವರಿ 14ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ವೈರಲ್ ಆಗಿರುವ ವಿಡಿಯೋಗಳಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ಒಂದೇ ವೇದಿಕೆ ಹಂಚಿಕೊಂಡಿರುವುದು ಗಮನ ಸೆಳೆದಿದೆ. ಈ ಹಿಂದೆ ಗಿಲ್ಲಿ ಟ್ರೋಫಿ ಎತ್ತಿದ ಬಳಿಕ ಅಶ್ವಿನಿ ಗೌಡ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಕ್ಷಣಗಳು ಅಭಿಮಾನಿಗಳ ನೆನಪಿನಲ್ಲಿ ಇನ್ನೂ ಹಸಿರಾಗಿವೆ.

ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಒಟ್ಟಾಗಿ ಫನ್ ಗೇಮ್ಸ್ ಆಡುತ್ತಾ, ಬಿಗ್‌ಬಾಸ್ ಮನೆಯ ದಿನಗಳನ್ನು ನೆನಪಿಸಿಕೊಂಡರು. ದೊಡ್ಮನೆ ಬಳಿಕ ತಮ್ಮ ಜೀವನದಲ್ಲಿ ನಡೆದ ಬದಲಾವಣೆಗಳನ್ನು ಮನದಟ್ಟು ಮಾಡಿಕೊಂಡರು. ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಖ್ಯಾತಿಯ ಸುಷ್ಮಾ ರಾವ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ರಘು ಮತ್ತು ಅಶ್ವಿನಿ ಗೌಡ ಬಿಂದಾಸ್ ಡ್ಯಾನ್ಸ್ ಮೂಲಕ ವೇದಿಕೆಗೆ ಚೈತನ್ಯ ತುಂಬಿದರು. ಸ್ಪರ್ಧಿಗಳ ಜೊತೆಗೆ ಅವರ ಕುಟುಂಬ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂಭ್ರಮಕ್ಕೆ ಇನ್ನಷ್ಟು ಅರ್ಥ ತುಂಬಿತು. ರಕ್ಷಿತಾ ಮಾತನಾಡುವ ವೇಳೆ “ಇದು ನಾಮಿನೇಷನ್ ಅಲ್ಲ” ಎಂದು ಗಿಲ್ಲಿ ಕಾಲೆಳೆದ ಕ್ಷಣ ನಗು ತರಿಸಿತು. ಸೂರಜ್–ರಾಶಿಕಾ ಜೋಡಿ ಗೇಮ್ಸ್‌ನಲ್ಲಿ ಮಿಂಚಿದರು.

ಬಿಗ್‌ಬಾಸ್ ವಿನ್ನರ್ ಗಿಲ್ಲಿಯ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಟ್ರೋಫಿ ಗೆದ್ದ ದಿನದಿಂದಲೇ ಗಿಲ್ಲಿ ನಿರಂತರವಾಗಿ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಹಾಗೂ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕ್ಷಣವೂ ಪುರಸೊತ್ತು ಇಲ್ಲದಂತಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. “ಗಿಲ್ಲಿ ನಮ್ಮನ್ನು ಭೇಟಿ ಮಾಡುತ್ತಿಲ್ಲ” ಎಂದು ಅಭಿಮಾನಿಗಳು ಹೇಳಿಕೊಂಡರೆ, ಕೆಲ ನಿರ್ಮಾಪಕರು “ಸಿನಿಮಾ ಪ್ರಚಾರಕ್ಕೆ ಗಿಲ್ಲಿ ಬಂದಿಲ್ಲ” ಎಂದು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಘಟನೆಗಳು ಕೂಡ ಗಮನ ಸೆಳೆದಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 09:54:29
No Reviews