ಬಾಂಗ್ಲಾದೇಶದ ಭರ್ಜರಿ ಸಾಧನೆ: ಪಾಕಿಸ್ತಾನ ವಿರುದ್ಧ ಜಯ, ಭಾರತಕ್ಕೆ ಶಾಕ್

ನವದೆಹಲಿ: ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡ 78 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡ ಬಾಂಗ್ಲಾದೇಶ, ಪಾಕಿಸ್ತಾನ ನೆಲದಲ್ಲೇ ಐತಿಹಾಸಿಕ ಸಾಧನೆ ಮಾಡಿದೆ.

ಈ ಗೆಲುವಿನ ಮೂಲಕ ಬಾಂಗ್ಲಾದೇಶ 2025-26ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC) ಅಂಕಪಟ್ಟಿಯಲ್ಲಿ ಮಹತ್ವದ ಏರಿಕೆ ಕಂಡಿದೆ. ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು, ಒಂದು ಡ್ರಾ ಮತ್ತು ಒಂದು ಸೋಲಿನೊಂದಿಗೆ 28 ಅಂಕ ಹಾಗೂ 58.33% ಗೆಲುವಿನ ಸರಾಸರಿ ಹೊಂದಿರುವ ಬಾಂಗ್ಲಾದೇಶ ಇದೀಗ ಐದನೇ ಸ್ಥಾನಕ್ಕೇರಿದ್ದು, ಭಾರತ ತಂಡವನ್ನು ಹಿಂದಿಕ್ಕಿದೆ. ಶುಭ್‌ಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಆರನೇ ಸ್ಥಾನಕ್ಕೆ ಕುಸಿದಿದೆ.

ಭಾರತ ತಂಡ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು ಮಾತ್ರ ದಾಖಲಿಸಿದ್ದು, 48.15% ಗೆಲುವಿನ ಸರಾಸರಿಯೊಂದಿಗೆ ಹಿನ್ನಡೆಯಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ 0-2 ಅಂತರದಲ್ಲಿ ಸೋತಿರುವುದು ಭಾರತದ ಸ್ಥಿತಿಗೆ ದೊಡ್ಡ ಹೊಡೆತ ನೀಡಿದೆ.

2025-26 WTC ಅಂಕಪಟ್ಟಿ ಪ್ರಕಾರ ಆಸ್ಟ್ರೇಲಿಯಾ (87.50%) ಅಗ್ರಸ್ಥಾನದಲ್ಲಿದ್ದು, ನಂತರ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ಭಾರತ ಕ್ರಮವಾಗಿ ಸ್ಥಾನ ಪಡೆದಿವೆ.

ಈ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 116 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದರೂ, ಲಿಟನ್ ದಾಸ್ (126) ಶತಕದ ನೆರವಿನಿಂದ 278 ರನ್‌ಗಳಿಗೆ ತಲುಪಿತು. ಪಾಕಿಸ್ತಾನ 232 ರನ್‌ಗಳಿಗೆ ಆಲ್‌ಔಟ್ ಆಗಿ ಸ್ವಲ್ಪ ಮುನ್ನಡೆ ನೀಡಿತು.

ಎರಡನೇ ಇನಿಂಗ್ಸ್‌ನಲ್ಲಿ ಮುಷ್ಫಿಕರ್ ರಹೀಮ್ (137) ಮತ್ತು ಲಿಟನ್ ದಾಸ್ (69) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ 390 ರನ್‌ಗಳನ್ನು ಸೇರಿಸಿ ಪಾಕಿಸ್ತಾನಕ್ಕೆ 437 ರನ್‌ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಪಾಕ್ ಮೊಹಮ್ಮದ್ ರಿಝ್ವಾನ್ (90) ಹೋರಾಟ ನೀಡಿದರೂ, ತೈಜುಲ್ ಇಸ್ಲಾಮ್ (6/120) ಅವರ ಸ್ಪಿನ್ ದಾಳಿಗೆ ತತ್ತರಿಸಿ 358 ರನ್‌ಗಳಿಗೆ ಆಲ್‌ಔಟ್ ಆಯಿತು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-20 18:53:46
No Reviews