ಆಗ್ರಾ ವಾಯುಪಡೆ ಆವರಣದಲ್ಲಿ ಪಾಕಿಸ್ತಾನಿ ಬಲೂನ್ ಪತ್ತೆ

ಆಗ್ರಾ ವಾಯುಪಡೆ ನಿಲ್ದಾಣದ ನಿರ್ಬಂಧಿತ ತಾಂತ್ರಿಕ ಪ್ರದೇಶದಲ್ಲಿ ಫೆಬ್ರವರಿ 12ರಂದು Pakistan International Airlines (PIA) ಹೆಸರಿರುವ ವಿಮಾನ ಆಕಾರದ ಬಲೂನ್ ಪತ್ತೆಯಾಗಿದ್ದು, ಈ ಘಟನೆ ಭದ್ರತಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಹಲವು ಆಯಾಮಗಳಿಂದ ಸಮಗ್ರ ತನಿಖೆಯನ್ನು ಆರಂಭಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಹಸಿರು–ಬಿಳಿ ಬಣ್ಣದ ಈ ಬಲೂನ್‌ನ್ನು ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ವಾಯುನೆಲೆಯ ಹೈ-ಸೆಕ್ಯುರಿಟಿ ತಾಂತ್ರಿಕ ವಲಯದಲ್ಲಿ ಪತ್ತೆ ಹಚ್ಚಲಾಗಿದೆ. ಬಲೂನ್ ಮೇಲೆ ಉರ್ದು ಭಾಷೆಯ ಬರಹಗಳಿದ್ದು, ಸುಮಾರು 10 ಮೀಟರ್ ಉದ್ದದ ದಾರವನ್ನು ಇದಕ್ಕೆ ಜೋಡಿಸಲಾಗಿತ್ತು. ಬಲೂನ್‌ನ್ನು ವಶಪಡಿಸಿಕೊಂಡು ಶಹಗಂಜ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಭಾರತೀಯ ವಾಯುಪಡೆ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಗುಪ್ತಚರ ಸಂಸ್ಥೆಗಳು ಹಾಗೂ ವಾಯುಪಡೆ ಅಧಿಕಾರಿಗಳು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಬಲೂನ್ ಹೇಗೆ ಅತ್ಯಂತ ಭದ್ರತೆಯ ತಾಂತ್ರಿಕ ವಲಯವನ್ನು ಪ್ರವೇಶಿಸಿತು ಎಂಬುದನ್ನು ತಿಳಿಯಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಗೌರವ್ ಸಿಂಗ್ ಮಾತನಾಡಿ, “ಬಲೂನ್ ಒಳಗೆ ಯಾವುದೇ ತಾಂತ್ರಿಕ ಸಾಧನಗಳು ಅಥವಾ ವಿಷಕಾರಿ ಅನಿಲ ಪತ್ತೆಯಾಗಿಲ್ಲ. ಆದರೂ ಭದ್ರತಾ ದೃಷ್ಟಿಯಿಂದ ತನಿಖೆ ಮುಂದುವರಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಗಮನಾರ್ಹ ಅಂಶವೆಂದರೆ, ಇಂತಹ ಘಟನೆಗಳು ಹೊಸದಲ್ಲ. ಈ ಹಿಂದೆಯೂ ಗಡಿ ಪ್ರದೇಶಗಳಲ್ಲಿ ಇದೇ ರೀತಿಯ ಪಿಐಎ ಲೋಗೋ ಹೊಂದಿರುವ ಬಲೂನ್‌ಗಳು ಪತ್ತೆಯಾಗಿದ್ದವು. ಇತ್ತೀಚೆಗೆ ರಾಜಸ್ಥಾನದ ಬಿಕಾನೇರ್‌ನಲ್ಲಿ ಒಂದು ಬಲೂನ್ ವಶಪಡಿಸಿಕೊಳ್ಳಲಾಗಿದ್ದರೆ, 2025ರ ಜೂನ್‌ನಲ್ಲಿ ಶ್ರೀಗಂಗಾನಗರದಲ್ಲೂ ಹಾಗೂ ಆಗಸ್ಟ್‌ನಲ್ಲಿ ಜಮ್ಮುವಿನ ನೈ ಬಸ್ತಿ ಪ್ರದೇಶದಲ್ಲೂ ಇಂತಹ ಘಟನೆಗಳು ವರದಿಯಾಗಿದ್ದವು.

ಈ ಹಿನ್ನಲೆಯಲ್ಲಿ, ಆಗ್ರಾ ವಾಯುಪಡೆ ನಿಲ್ದಾಣದಲ್ಲಿ ಪತ್ತೆಯಾದ ಬಲೂನ್ ಪ್ರಕರಣವನ್ನು ಭದ್ರತಾ ಸಂಸ್ಥೆಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-16 16:59:34
No Reviews